ಯೆಮನ್, ಏ 20 (DaijiworldNews/MS): ಯುದ್ಧ ಪೀಡಿತ ಯೆಮನ್ನ ಸನಾದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಿದ್ದ ನೆರವು ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 85ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಭೀಕರ ಘಟನೆಯಲ್ಲಿ 322 ಮಂದಿ ಗಾಯಗೊಂಡಿದ್ದು, 13 ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೂತಿ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿ ಜನರು ಓಡುತ್ತಿರುವುದನ್ನು ಮತ್ತು ಕಾಲ್ತುಳಿತ ನೆಲದ ಮೇಲೆ ಹೆಣವಾಗಿರುವ ಘಟನೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಕೆಲ ವ್ಯಾಪಾರಿಗಳು ಸರ್ಕಾರದ ಆಂತರಿಕ ಸಚಿವಾಲಯದ ಗಮನಕ್ಕೆ ತಾರದೇ ಬುಧವಾರ ಸಂಜೆ ಜನರಿಗೆ ನೆರವಿನ ರೂಪದಲ್ಲಿ ಹಣ ವಿತರಿಸಿದ್ದಾರೆ. ಆಗ ಈ ಘಟನೆ ನಡೆದಿದೆ‘ ಎಂದು ಹೂತಿ ನಿಯಂತ್ರಿತ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಖಾಲಿದ್ ಅಲ್-ಅಜ್ರಿ ತಿಳಿಸಿದ್ದಾರೆ.