ಕೊಲಂಬಸ್, ಏ 21 (DaijiworldNews/MS):ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯೊಬ್ಬ ದುಷ್ಕರ್ಮಿಗಳ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ.
ಮೃತನನ್ನು ಸಾಯಿಶ್ ವೀರಾ ಎಂದು ಗುರುತಿಸಲಾಗಿದೆ 24 ವರ್ಷದ ಸಾಯಿಶ್ ಕೊಲಂಬಸ್ ನ ಇಂಧನ ಕೇಂದ್ರದಲ್ಲಿಕೆಲಸ ಮಾಡುತ್ತಿದ್ದು ಇಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಯುಎಸ್ ರಾಜ್ಯ ಓಹಿಯೋದ ಪೊಲೀಸರು ತಿಳಿಸಿದ್ದಾರೆ.
ಸಾಯಿಶ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದು ಕೇವಲ 10 ದಿನಗಳ ಅಂತರದಲ್ಲಿ ಪದವಿಯೊಂದಿಗೆ ಅವರು H1B ವೀಸಾದ ಅಡಿಯಲ್ಲಿ ಆಯ್ಕೆಯಾಗಿದ್ದರು. ಇಂಧನ ಕೇಂದ್ರದಲ್ಲಿನ ಕ್ಲಾರ್ಕ್ ಹುದ್ದೆಯನ್ನು ಅವರು ಒಂದೆರಡು ದಿನದಲ್ಲಿ ತೊರೆಯುವವರಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಹತ್ತಿರದ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಯಿಶ್ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಮುಂದಾಗಿದ್ದಾರೆ.
ಸಾಯಿಶ್ ತಮ್ಮ ಕುಟುಂಬದಲ್ಲಿ ಮೊದಲಿರಾಗಿ ಅಮೇರಿಕಾಕ್ಕೆ ಬಂದಿದ್ದರು. ಅವರ ತಂದೆ ಎರಡು ವರ್ಷಗಳ ಹಿಂದೆ ನಿಧನರಾದಾಗ ಕುಟುಂಬದ ಜವಬ್ದಾರಿಯನ್ನು ಹೊತ್ತಿದ್ದರು. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಕ್ರೀಡಾಪಟುವಾಗಿದ್ದರು.
ಕೊಲಂಬಸ್ ಪ್ರದೇಶದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬ ವ್ಯಕ್ತಿಗೂ ಆತನ ಪರಿಚಯವಿದೆ. ಅವರು ಓರ್ವ ಅದ್ಭುತ ಕ್ರಿಕೆಟಿಗ ಮತ್ತು ಉತ್ತಮ ಸ್ನೇಹಿತರಾಗಿದ್ದರು ಎಂದು ಸಾಯಿಶ್ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಆನ್ಲೈನ್ ನಿಧಿ ಸಂಗ್ರಹ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತಿರುವ ರೋಹಿತ್ ಯಲಮಂಚಿಲಿ ಹೇಳಿದ್ದಾರೆ.