ಇಸ್ಲಾಮಾಬಾದ್, ಏ 27 (DaijiworldNews/MS): ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು, "ಪಾಕಿಸ್ತಾನದ ಸೈನ್ಯಕ್ಕೆ ಭಾರತದ ವಿರುದ್ಧ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.
ಈ ಕುರಿತ ವಿಡಿಯೋ ಒಂದು ವೈರಲ್ ಆಗಿದ್ದು, ಭಾರತದ ಜತೆ ಕಾದಾಡುವ ಸ್ಥಿತಿಯಲ್ಲಿ ದೇಶದ ಸೇನೆ ಹಾಗೂ ಟ್ಯಾಂಕ್ಗಳಿಲ್ಲ. ಜತೆಗೆ ಆರ್ಥಿಕ ಬಲವೂ ಇಲ್ಲ ಎಂದು 25 ಪತ್ರಕರ್ತರಿದ್ದ ಸುದ್ದಿಗೋಷ್ಠಿಯಲ್ಲಿ ಬಾಜ್ವಾ ತಿಳಿಸಿದ್ದರು ಎಂಬುದಾಗಿ ಈ ವಾರದ ಆರಂಭದಲ್ಲಿ ಇಬ್ಬರು ಪ್ರಮುಖ ಪತ್ರಕರ್ತರಾದಹಮೀದ್ ಮಿರ್ ಮತ್ತು ನಸೀಮ್ ಝೆಹ್ರಾ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
"ಟ್ಯಾಂಕ್ಗಳು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಪಡೆಗಳ ಚಲನವಲನಕ್ಕೆ ಡೀಸೆಲ್ ಲಭ್ಯವಿಲ್ಲ. ಪಾಕಿಸ್ತಾನ ಸೇನೆಗೆ ಯುದ್ಧ ಮಾಡುವ ಸಾಮರ್ಥ್ಯ ಇಲ್ಲ ಎಂದು 20- 25 ಜನರ ಮುಂದೆ ಬಾಜ್ವಾ ನಮಗೆ ತಿಳಿಸಿದ್ದರು" ಎಂದು ಹಮೀದ್ ಮಿರ್ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜನರಲ್ ಬಾಜ್ವಾ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡರು ಬಾಜ್ವಾ ಅವರು ಭಾರತದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಕಾರಣರಾಗಿದ್ದರು ಮತ್ತು ಪ್ರತಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯಲು ಬಯಸಿದ್ದರು ಎಂದು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಈ ಸಂದರ್ಭ ಹೇಳಿದ್ದಾರೆ.