ಇಸ್ತಾಂಬುಲ್, ಮೇ 1 (DaijiworldNews/MS): ಶಂಕಿತ ಡಾಯೆಶ್/ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಅಬು ಹುಸೇನ್ ಅಲ್-ಖುರೇಶಿಯನ್ನು ಸಿರಿಯಾದಲ್ಲಿ ಹತ್ಯೆಮಾಡಲಾಗಿದೆ ಎಂದು ಟರ್ಕಿಶ್ ಅಧ್ಯಕ್ಷ ಎರ್ಡೊಗನ್ ಹೇಳಿದ್ದಾರೆ.
ಎರ್ಡೊಗನ್ ಅವರು, ತಮ್ಮ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ಅಬು ಹುಸೇನ್ ಅಲ್-ಖುರೇಶಿ ಎಂಬ ಎಂಬ ಶಂಕಿತನನ್ನು ಕೊಂದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ನಿನ್ನೆ ರಾಷ್ಟ್ರೀಯ ಗುಪ್ತಚರ ಸಂಸ್ಥೆಯು ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಯ ನಾಯಕನನ್ನು ಹತ್ಯೆ ನಡೆಸಲಾಗಿದೆ. ಟರ್ಕಿಯು ಯಾವುದೇ ತಾರತಮ್ಯವಿಲ್ಲದೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋರಾಟವನ್ನು ಮುಂದುವರೆಸಲಿದೆ" ಎಂದು ಎಂದು ಎರ್ಡೊಗನ್ ತಿಳಿಸಿದ್ದಾರೆ.
ಅನಾಡೋಲು ಏಜೆನ್ಸಿ ಪ್ರಕಾರ, 2013 ರಲ್ಲಿ, ಡೇಶ್/ಐಸಿಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಮೊದಲ ದೇಶಗಳಲ್ಲಿ ಟರ್ಕಿ ಒಂದಾಗಿದೆ. ಅಂದಿನಿಂದ ದೇಶವು ಅನೇಕ ಬಾರಿ ಭಯೋತ್ಪಾದಕ ಗುಂಪಿನಿಂದ ದಾಳಿಗೆ ಒಳಗಾಗಿದೆ. ಇಲ್ಲಿಯವರೆಗೂ ಸುಮಾರು 10 ಆತ್ಮಹತ್ಯಾ ಬಾಂಬ್ಗಳು, ಏಳು ಬಾಂಬ್ ದಾಳಿಗಳು ಮತ್ತು ನಾಲ್ಕು ಸಶಸ್ತ್ರ ದಾಳಿಗಳಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.