ಉಕ್ರೇನ್ ,ಮೇ 2(DaijiworldNews/KH):ಉಕ್ರೇನ್ ವಿದೇಶಾಂಗ ಸಚಿವೆ ಎಮಿನ್ ಡಿಜೆಪ್ಪರ್ ಭಾರತದ ಕ್ಷಮೆಯಾಚಿಸಿದ್ದಾರೆ. ಉಕ್ರೇನ್ ರಕ್ಷಣಾ ಸಚಿವಾಲಯ ಕಾಳಿ ಮಾತೆಯನ್ನು ಹೋಲುವ ಚಿತ್ರ ರಚಿಸಿ ಪೋಸ್ಟ್ ಮಾಡಿದ ಟ್ವೀಟ್ ಭಾರತದಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದ ಬೆನ್ನಲ್ಲೇ ಈ ಬಗ್ಗೆ ಸಚಿವೆ ಎಮಿನ್ ವಿಷಾದ ವ್ಯಕ್ತಪಡಿಸಿದ್ದಾರೆ.
"ಕಾಳಿ ಮಾತೆಯನ್ನು ವಿಕೃತ ರೀತಿಯಲ್ಲಿ ಚಿತ್ರಿಸಿರುವುದನ್ನು ಉಕ್ರೇನ್ ವಿಷಾದಿಸುತ್ತದೆ. ಮತ್ತು ಯುರೋಪಿಯನ್ ದೇಶವು ಭಾರತೀಯರ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ. ನಾವು ಭಾರತದ ಬೆಂಬಲವನ್ನು ಹೆಚ್ಚು ಬಯಸುತ್ತೇವೆ. ವಿವಾದಿತ ಚಿತ್ರ ಈಗಾಗಲೇ ತೆಗೆದುಹಾಕಲಾಗಿದೆ. ಭಾರತ ಮತ್ತು ಉಕ್ರೇನ್ ದೇಶ ಪರಸ್ಪರ ಗೌರವ ಮತ್ತು ಸ್ನೇಹದ ಮೂಲಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸಿ" ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಎಮಿನ್ ಡಿಜೆಪ್ಪರ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ನ ರಕ್ಷಣಾ ಸಚಿವಾಲಯದ ಟ್ವಿಟರ್ ಖಾತೆ ಯಲ್ಲಿ “ವರ್ಕ್ ಆಫ್ ಆರ್ಟ್’ ಎನ್ನುವ ತಲೆಬರಹದಲ್ಲಿ ಹಂಚಿಕೊಂಡಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿತ್ತು. ಮೋಡದ ಚಿತ್ರವೊಂದನ್ನು ಮಹಿಳೆಯಂತೆ ರಚಿಸಲಾಗಿದ್ದು, ದೇಹಭಾಗವನ್ನು ಕಾಳಿಯಂತೆಯೂ, ತಲೆಕೂದಲನ್ನು ಹಾಲಿವುಡ್ ನಟಿ ಮರ್ಲಿನ್ ರೀತಿ ರಚಿಸಲಾಗಿತ್ತು. ಕಾಳಿ ದೇಹವಿರುವ ಚಿತ್ರದಲ್ಲಿ ಮೋಡವನ್ನೇ ಸ್ಕರ್ಟ್ ರೀತಿ ರಚಿಸಿ, ಗಾಳಿಗೆ ಅದು ತೂರುವಂತೆ ಚಿತ್ರಿಸಲಾಗಿತ್ತು.
ಚಿತ್ರವನ್ನು ಪೋಸ್ಟ್ ಮಾಡಿದ ನಂತರ ಭಾರೀ ಟೀಕೆ ವ್ಯಕ್ತವಾದ ಹಿನ್ನಲೆ ರಕ್ಷಣಾ ಸಚಿವಾಲಯ ಈ ಟ್ವೀಟ್ ನ್ನು ಡಿಲೀಟ್ ಮಾಡಿತ್ತು.