ಕ್ಯಾಲಿಫೋರ್ನಿಯಾ, ಜೂ 01(DaijiworldNews/MS): 2004ರ ಮಾರ್ಚ್ನಲ್ಲಿ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಾಗ ನಾನು ಲೋಕಸಭೆಯಿಂದ ಅನರ್ಹಗೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ ಈ ಅನರ್ಹತೆ ನನಗೆ ಜನರ ಸೇವೆ ಮಾಡಲು "ದೊಡ್ಡ ಅವಕಾಶ" ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ಮೂರು ನಗರಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸರಣಿ ಪ್ರಶ್ನೆಗಳಿಗೆ ಉತ್ತರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.
"ನಾನು ರಾಜಕೀಯ ಸೇರಿದಾಗ ನಾನು ಏನೆಲ್ಲ ಎದುರಿಸಲಿದ್ದೇನೆ ಎಂಬ ಕಲ್ಪನೆಯನ್ನೂ ಮಾಡಿರಲಿಲ್ಲ. ಈ ರೀತಿ ಏನಾದರೂ ನಡೆಯಬಹುದು ಎಂಬುದನ್ನೂ ಊಹಿಸಿರಲಿಲ್ಲ. ಆದರೆ ಅನರ್ಹತೆ ನಿಜವಾಗಿ ನನಗೆ ಒಂದು ದೊಡ್ಡ ಅವಕಾಶವನ್ನು ನೀಡಿದೆ ಎಂದು ಭಾವಿಸುತ್ತೇನೆ. ಬಹುಶಃ ನನಗೆ ಸಿಗುವ ಅವಕಾಶಕ್ಕಿಂತ ದೊಡ್ಡದಾಗಿದೆ. ಅದು ರಾಜಕೀಯ ಕೆಲಸ ಮಾಡುವ ವಿಧಾನವಾಗಿದೆ" ಎಂದು ಅವರು ಹೇಳಿದ್ದಾರೆ.
"ಆರು ತಿಂಗಳ ಹಿಂದೆ ನಿಜವಾದ ನಾಟಕ ಆರಂಭವಾಯಿತು ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿನ ಇಡೀ ವಿರೋಧ ಪಕ್ಷ ಕಷ್ಟಪಡುತ್ತಿತ್ತು. ಪ್ರಭುತ್ವದ ವಿರುದ್ಧ ಹೋರಾಡಲು ಹೆಣಗಾಡುತ್ತಿತ್ತು. ಯಾಕೆಂದರೆ ಭಾರಿ ಆರ್ಥಿಕ ಪ್ರಾಬಲ್ಯ. ಸಂವಿಧಾನಿಕ ಸಂಸ್ಥೆಗಳ ವಶವಾಗಿದ್ದು ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ಹೋರಾಟ ಮಾಡಲು ನಾವು ಹೆಣಗಾಡುತ್ತಿದ್ದೇವೆ.ಇದೇ ಸಮಯದಲ್ಲಿ ನಾನು 'ಭಾರತ್ ಜೋಡೋ ಯಾತ್ರೆ' ಮಾಡಲು ನಿರ್ಧರಿಸಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.