ವಾಷಿಂಗ್ಟನ್, ಜು 22(DaijiworldNews/AK):ಭಾರತ ಸರ್ಕಾರ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ಹಿನ್ನಲೆ ಅಮೆರಿಕದಲ್ಲಿ ಅಕ್ಕಿ ಅಭಾವ ಉಂಟಾಗಿದೆ. ಹೀಗಾಗಿ ಅಮೇರಿಕಾದಲ್ಲಿ ಸ್ಟೋರ್ಗಳಲ್ಲಿ ಅಕ್ಕಿ ಖರೀದಿಸಲು ಭಾರತೀಯರು ಮುಗಿಬೀಳುತ್ತಿದ್ದಾರೆ.
ಅಕ್ಕಿ ಅಭಾವ ಸೃಷ್ಟಿಯಾಗುವ ಆತಂಕದಲ್ಲಿರುವ ಭಾರತೀಯರು ಶಾಪಿಂಗ್ ಮಾಲ್ಗಳು ಹಾಗೂ ಕಾಸ್ಟ್ಕೋ ಮಾರುಕಟ್ಟೆಯಲ್ಲಿ ಸರತಿ ಸಾಲಿನಲ್ಲಿ ತಾಮುಂದು ನಾ ಮುಂದು ಎಂದು ನಿಂತು ಚೀಲಗಟ್ಟಲೇ ಅಕ್ಕಿ ಖರೀದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನೊಂದಡೆ ಅಕ್ಕಿಗಾಗಿ ಜನರು ಜಗಳ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ. ಭಾರತ ಸರ್ಕಾರ ಬಾಸುಮತಿ ಹೊರತಾದ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದೆ. ಡಿಜಿಎಫ್ಟಿ ಆದೇಶದಿಂದ ಶೇ.80ರಷ್ಟು ಅಕ್ಕಿ ರಫ್ತಿನ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಭಾರತೀಯರು ಅಕ್ಕಿಯನ್ನು ತರಲು ಭಾರತೀಯ ಮಳಿಗೆಗಳು ಹಾಗೂ ಕಾಸ್ಟ್ಕೋ ಮಳಿಗೆಗಳಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಧಾವಿಸುತ್ತಿದ್ದಾರೆ. ಆದರೆ, ಬಹಳಷ್ಟು ಇಂಡಿಯನ್ ಸ್ಟೋರ್ಗಳು ಒಬ್ಬರಿಗೆ ಒಂದೇ ಚೀಲ ಎಂದು ನಿಯಮವನ್ನು ಹಾಕಿದೆ. ಅದಲ್ಲದೇ, ಬಹಳಷ್ಟು ಮಳಿಗೆಗಳಲ್ಲಿ ಅಕ್ಕಿ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 25 ಕೆಜಿ ಅಕ್ಕಿ ಮೂಟೆಗೆ 22 ಡಾಲರ್ಗಳಿಗಿಂತ ಕಡಿಮೆ ಬೆಲೆ ಇತ್ತು.ಆದರೆ, ಈಗ ಅದರ ದರ 32 ರಿಂದ 47 ಡಾಲರ್ವರೆಗೆ ಏರಿಕೆ ಆಗಿದೆ.