ಒಟ್ಟಾವ, ಆ 3 (DaijiworldNews/AK): ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು 18 ವರ್ಷಗಳ ದಾಂಪತ್ಯದ ನಂತರ ಪತ್ನಿ ಸೋಫಿ ಗ್ರೆಗೊಯಿರ್ನಿಂದ ಬೇರ್ಪಡುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಕುರಿತು ಪ್ರಧಾನಿ ದಂಪತಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಜಸ್ಟಿನ್ ಟ್ರುಡೊ ಮತ್ತು ಸೋಫಿ ಅವರು ಸುದೀರ್ಘ ಸಂಭಾಷಣೆಯ ನಂತರ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಇದಲ್ಲದೆ, ಪ್ರಧಾನಿ ಕಾರ್ಯಾಲಯ ಹೊರಡಿಸಿದ ಹೇಳಿಕೆಯಲ್ಲಿ, ಇಬ್ಬರೂ ಕಾನೂನು ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.ಇವರಿಬ್ಬರ ಹದಿನೆಂಟು ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಂತಾಗಿದೆ.
ಜಸ್ಟಿನ್ ಟ್ರುಡೊ ಮೇ 28, 2005 ರಂದು ಮಾಂಟ್ರಿಯಲ್ನಲ್ಲಿ ವಿವಾಹವಾದರು. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ನಂತರ, ಸೋಫಿ ತಮ್ಮ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದರು. 48 ವರ್ಷದ ಸೋಫಿ ಕ್ವಿಬೆಕ್ನಲ್ಲಿ ದೂರದರ್ಶನ ವರದಿಗಾರ್ತಿಯೂ ಆಗಿದ್ದಾರೆ. ಅವರು 51 ವರ್ಷದ ಜಸ್ಟಿನ್ ಟ್ರುಡೊ ಅವರೊಂದಿಗೆ ಮೂರು ಚುನಾವಣೆಗಳಿಗೆ ಪ್ರಚಾರವನ್ನೂ ಮಾಡಿದ್ದಾರೆ.
ಟ್ರುಡೊ ದಂಪತಿಗೆ ಜೇವಿಯರ್ ಮತ್ತು ಹ್ಯಾಡ್ರಿಯನ್ ಮತ್ತು ಮಗಳು ಎಲಾ-ಗ್ರೇಸ್ ಮೂವರು ಮಕ್ಕಳಿದ್ದಾರೆ. ಜಸ್ಟಿನ್ ಟ್ರುಡೋ ಅವರು ತಮ್ಮ ವಿಚ್ಛೇದನದ ಕುರಿತು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು ಇದೇ ವೇಳೆ ದಂಪತಿ ತಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆಯೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಜಸ್ಟಿನ್ ಟ್ರುಡೊ ಅವರ ತಂದೆ, ಮಾಜಿ ಪ್ರಧಾನಿ ಪಿಯರೆ ಟ್ರುಡೊ ಅವರು ಕೂಡ ಅಧಿಕಾರದಲ್ಲಿದ್ದಾಗ 1977 ರಲ್ಲಿ ಅವರ ಪತ್ನಿ ಮಾರ್ಗರೆಟ್ರಿಂದ ವಿಚ್ಚೇದನ ಪಡೆದಿದ್ದರು.