ರಾವಲ್ಪಿಂಡಿ, ಆ 06 (DaijiworldNews/MS): ಪಾಕಿಸ್ತಾನದಲ್ಲಿ ಹಜಾರಾ ಎಕ್ಸ್ಪ್ರೆಸ್ ರೈಲಿನ ಹಲವು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಶೆಹಜಾದ್ ಪುರ ಮತ್ತು ನವಾಬ್ ಶಾ ನಡುವಿನ ಸರ್ಹರಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಹಲವಾರು ಪ್ರಯಾಣಿಕರು ಬೋಗಿಗಳಲ್ಲಿ ಸಿಲುಕಿದ್ದಾರೆ.
ಅಪಘಾತವಾದ ರೈಲು ಕರಾಚಿಯಿಂದ ಪಾಕಿಸ್ತಾನದ ಪಂಜಾಬ್ ಗೆ ಹೊರಟಿತ್ತು. ಗಾಯಗೊಂಡವರನ್ನು ಕೂಡಲೇ ನವಾಬ್ ಶಾದಲ್ಲಿರುವ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಹೆಚ್ಚಿನ ರಕ್ಷಣಾ ತಂಡಗಳನ್ನು ಮತ್ತು ಪರಿಹಾರ ರೈಲನ್ನು ಕಳುಹಿಸಲಾಗಿದೆ ಎಂದು ಸ್ಥಳೀಯ ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ರೈಲು ಹಳಿ ತಪ್ಪಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.