ಹವಾಯಿ, ಆ 11(DaijiworldNews/Ak): ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯ ಹವಾಯಿಯಲ್ಲಿ ಉಂಟಾದ ಭಾರಿ ಕಾಡ್ಗಿಚ್ಚು ದ್ವೀಪರಾಜ್ಯದ ಮವ್ವಿ ಪಟ್ಟಣವನ್ನು ವ್ಯಾಪಿಸಿದ್ದು, ಪಟ್ಟಣದ ಬಹುತೇಕ ಭಾಗ ಬೆಂಕಿ ಅವಘಡಕ್ಕೆ ಭಸ್ಮಗೊಂಡಿದೆ.
ಅಮೆರಿಕದ ಹವಾಯಿಯಲ್ಲಿರುವ ಮಾಯಿ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದಾಗಿ ಬೆಂಕಿಯ ಜ್ವಾಲೆ ಇಡೀ ನಗರವನ್ನೇ ಆವರಿಸಿಕೊಂಡಿದೆ. ಲಹೈನಾ ಪಟ್ಟಣದ ಸುಮಾರು 53 ಜನರು ಬೆಂಕಿಯ ಅವಘಡಕ್ಕೆ ಸಿಲುಕಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ .ಅಲ್ಲದೆ ಸಾವಿರಾರು ಕುಟುಂಬ ತಮ್ಮ ಸೂರುಗಳನ್ನು ಕಳೆದುಕೊಂಡು ಅತಂತ್ರವಾಗಿವೆ ಎನ್ನಲಾಗಿದೆ.
ಆಗಸ್ಟ್ 8 ಮಂಗಳವಾರದಂದು ಕಾಣಿಸಿಕೊಂಡ ಬೆಂಕಿ ಮಾಯಿಯ ಸುತ್ತಮುತ್ತಲಿನ ಒಣ ಪೊದೆಗಳಿಗೆ ಆವರಿಸಿಕೊಂಡು ದೊಡ್ಡ ಮಟ್ಟದಲ್ಲಿ ಹರಡತೊಡಗಿದೆ.
ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ದ್ವೀಪದಲ್ಲಿರುವ ಐತಿಹಾಸಿಕ ಪಟ್ಟಣಗಳ ದೊಡ್ಡ ಭಾಗಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಬೂದಿಯಾಗಿದೆ.
ಜನಪ್ರಿಯ ಪ್ರವಾಸಿ ತಾಣವಾದ ಲಹೈನಾ ಪಟ್ಟಣ ಸೇರಿದಂತೆ ಹಲವು ಕಡೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.ಕಾಡ್ಗಿಚ್ಚಿನಿಂದಾಗಿ ಲಹೈನಾ ಪಟ್ಟಣದ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಹಾನಿ ಉಂಟಾಗಿದೆ.
ಅಮೆರಿಕದ ಹವಾಮಾನ ಇಲಾಖೆಯ ಪ್ರಕಾರ, ಹವಾಯಿಯಲ್ಲಿ ಈ ರೀತಿಯಾಗಿ ಕಾಡ್ಗಿಚ್ಚು ಏರಲು ಡೋರಾ ಚಂಡಮಾರುತವೂ ಕಾರಣ. ಬಿರುಸಾದಗಾಳಿ ಬೆಂಕಿಯನ್ನು ಬಹಳ ಬೇಗವಾಗಿ ಹರಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಈ ದುರಂತದಲ್ಲಿ ಸುಮಾರು 1,000 ಮಂದಿ ಕಾಣೆಯಾಗಿದ್ದಾರೆ. ಇಡೀ ನಗರವೇ ಭೂದಿಯಿಂದ ಆವರಿಸಿಕೊಂಡಂತೆ ಕಾಣುತ್ತದೆ ಎನ್ನಲಾಗಿದೆ. ಇದು ಹವಾಯಿ ದ್ವೀಪದ ಇತಿಹಾಸದಲ್ಲಿ ಭೀಕರ ಅಗ್ನಿ ಅವಘಡವಾಗಿದೆ. ದ್ವೀಪದ ಪ್ರಮುಖ ಆದಾಯವಾಗಿರುವ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.