ಸೌದಿಅರೇಬಿಯಾ, ಆ 30 (DaijiworldNews/MS): ಸೂಕ್ತ ಕಾರಣವಿಲ್ಲದೆ ಮಕ್ಕಳು 20 ದಿನಗಳಿಗಿಂತ ಹೆಚ್ಚು ಶಾಲೆಗೆ ಗೈರುಹಾಜರಾದರೆ ಅಂತಹ ಮಕ್ಕಳ ಪೋಷಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾದ ನಿಯಮವನ್ನು ಸೌದಿಅರೇಬಿಯಾ ಜಾರಿಗೆ ತಂದಿದೆ.
ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿಸಲು ಸೌದಿಅರೇಬಿಯಾ ಮಕ್ಕಳ ರಕ್ಷಣಾ ಕಾನೂನಿಗೆ ಅನುಸಾರವಾಗಿ ಈ ಕ್ರಮ ಜಾರಿಗೊಳಿಸಲಾಗಿದೆ.
ಕಾನೂನುಬದ್ಧ ಕ್ಷಮೆಯಿಲ್ಲದೆ ವಿದ್ಯಾರ್ಥಿಯು 20 ದಿನಗಳವರೆಗೆ ಗೈರುಹಾಜರಾಗಿದ್ದರೆ, ಅವರ ತಂದೆ–ತಾಯಿ, ಪೋಷಕರನ್ನು ಮಕ್ಕಳ ರಕ್ಷಣಾ ಕಾನೂನಿನ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್ ಮೂಲಕ ತನಿಖೆಗೆ ಒಳಪಡಿಸಬಹುದು ಎಂದು ಗಲ್ಫ್ ನ್ಯೂಸ್ ಸೌದಿ ಔಟ್ಲೆಟ್ ಮಕ್ಕಾ ಉಲ್ಲೇಖಿಸಿದೆ.
ಈ ರೀತಿ ಪೋಷಕರನ್ನು ಬಂಧಿಸಲು ಹಲವು ಹಂತಗಳಿವೆ. ಮೊದಲು ಶಾಲೆಯ ಪ್ರಾಂಶುಪಾಲರು ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ವರದಿ ನೀಡಬೇಕು, ನಂತರ ಶಿಕ್ಷಣ ಸಚಿವಾಲಯ ಹಾಗೂ ಕುಟುಂಬ ಆರೈಕೆ ಇಲಾಖೆ ತನಿಖೆ ನಡೆಸಲಿದೆ. ಅದಾದ ಬಳಿಕ ಕೊನೆಯ ಹಂತದಲ್ಲಿ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಚಾರಣೆ ನಂತರ ಮಗುವಿಗೆ ಶಾಲೆಗೆ ಗೈರುಹಾಜರಾಗಿರುವ ತಪ್ಪಿತಸ್ಥರೆಂದು ಸಾಬೀತಾದರೆ, ನ್ಯಾಯಾಧೀಶರು ಪೋಷಕರ ವಿರುದ್ಧ ಸೂಕ್ತ ಅವಧಿಯ ಜೈಲು ಶಿಕ್ಷೆಯನ್ನು ವಿಧಿಸುವ ಅಧಿಕಾರವನ್ನು ಹೊಂದಿರುತ್ತಾರೆ.