ಟರ್ಕಿ, ಅ 02 (DaijiworldNews/AK):ಸಂಸತ್ ಮುಂದೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಈ ಆತ್ಮ ಹತ್ಯಾ ಬಾಂಬ್ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂಕಾರಾ ನಗರದಲ್ಲಿರುವ ಟರ್ಕಿ ಸಂಸತ್ ಗೇಟ್ ಎದುರು ಉಗ್ರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ದೊಡ್ಡ ಜ್ವಾಲೆಯ ನಂತರ ಪ್ರಬಲವಾದ ಸ್ಫೋಟವು ದಾಳಿಯ ಸ್ಥಳದಿಂದ ಹಲವಾರು ಕಿಲೋಮೀಟರ್ಗಳವರೆಗೆ ಕೇಳಿಸಿದೆ ಎನ್ನಲಾಗಿದೆ.
ಇಬ್ಬರು ಉಗ್ರರು ಬೆಳಿಗ್ಗೆ 9:30 ರ ಸುಮಾರಿಗೆ ವಾಣಿಜ್ಯ ವಾಹನದಲ್ಲಿ ಆಂತರಿಕ ಸಚಿವಾಲಯದ ಭದ್ರತಾ ಪ್ರಧಾನ ನಿರ್ದೇಶನಾಲಯದ ಗೇಟ್ ಬರುತ್ತಾರೆ. ವಾಹನದಿಂದ ಇಬ್ಬರು ಇಳಿಯುತ್ತಾರೆ. ಆ ಪೈಕಿ ಸೂಸೈಡ್ ಬಾಂಬರ್ ಗೇಟ್ನತ್ತ ಓಡುತ್ತಾನೆ. ಗೇಟ್ ಸಮೀಪಿಸುತ್ತಿದ್ದಂತೆ ಸ್ಫೋಟಿಸಿಕೊಳ್ಳುವುದನ್ನು ವೈರಲ್ ಆಗಿರು ವಿಡಿಯೋದಲ್ಲಿ ನೋಡಬಹುದು.
ನಮ್ಮ ಆಂತರಿಕ ಸಚಿವಾಲಯದ ಭದ್ರತಾ ಜನರಲ್ ಡೈರೆಕ್ಟರೇಟ್ನ ಪ್ರವೇಶ ದ್ವಾರದ ಮುಂದೆ ಬಂದು ಬಾಂಬ್ ದಾಳಿ ನಡೆಸಿದರು ಎಂದು ಟರ್ಕಿಟ ಆಂತರಿಕ ಸಚಿವಾಲಯವು ಹೇಳಿಕೆ ನೀಡಿದೆ.
ಒಬ್ಬ ಭಯೋತ್ಪಾದಕ ತನ್ನನ್ನು ತಾನು ಸ್ಫೋಟಿಸಿಕೊಂಡನು ಮತ್ತು ಇನ್ನೊಬ್ಬ ದಾಳಿ ಮಾಡುವುದನ್ನು ತಡೆಯಲಾಯಿತು. ಈ ವೇಳೆ, ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಚಿವಾಲಯವು ತಿಳಿಸಿದೆ.
ಆತ್ಮ ಹತ್ಯಾ ಬಾಂಬ್ ದಾಳಿ ನಡೆದ ಪ್ರದೇಶವು ಅನೇಕ ಸಚಿವಾಲಯಗಳ ನೆಲೆಯಾಗಿದೆ. ಅಲ್ಲದೇ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಭಾಷಣದೊಂದಿಗೆ ಭಾನುವಾರ ಸಂಸತ್ ತೆರೆಯಬೇಕಿತ್ತು. ಅಷ್ಟರಲ್ಲೇ ಉಗ್ರ ಕೃತ್ಯ ನಡೆದಿದೆ ಎಂದು ಟರ್ಕಿಯ ಮಾಧ್ಯಮಗಳು ವರದಿ ಮಾಡಿವೆ. ಘಟನೆ ನಡೆದ ಸ್ಥಳವನ್ನು ನಿರ್ಬಂಧಿಸಲಾಗಿದ್ದು, ತೀವ್ರ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.