ಇಟಲಿ,ಅ. 20 (DaijiworldNews/AK): ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಪತಿ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ 10 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವುದಾಗಿ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಟಿವಿ ಪತ್ರಕರ್ತರಾದ ಅವರ ಪತಿ ಲೈವ್ ಶೋನಲ್ಲಿ ಲೈಂಗಿಕತೆಯ ಬಗ್ಗೆ ಅಸಭ್ಯ ಮಾತುಗಳನ್ನು ಆಡಿದಕ್ಕೆ ಮೆಲೋನಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸುದ್ದಿ ವಾಹಿನಿಯೊಂದರಲ್ಲಿ ನಿರೂಪಕನಾಗಿ ಕಾರ್ಯನಿರ್ವಹಿಸುತ್ತಿರುವ ಆಂಡ್ರಿಯಾ, ಪ್ರಸಾರದ ವೇಳೆ ಆಕ್ಷೇಪಾರ್ಹ ಭಾಷೆ ಬಳಸಿ, ಮಹಿಳಾ ಸಹೋದ್ಯೋಗಿಯೊಂದಿಗೆ ಚೆಲ್ಲಾಟವಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು.
ಮತ್ತೊಂದು ಕಾರ್ಯಕ್ರಮದಲ್ಲಿ ಆಂಡ್ರಿಯಾ ತಮ್ಮ ವಿವಾಹೇತರ ಸಂಬಂಧಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು ಮತ್ತು ಸಾಮೂಹಿಕ ಅತ್ಯಾಚಾರದ ಬಲಿಪಶುವಿನ ಬಗ್ಗೆ ಅವರ ಅಗೌರವದ ಹೇಳಿಕೆಗಳಿಗಾಗಿ ಟೀಕೆಗಳನ್ನು ಎದುರಿಸಿದರು.
ತನ್ನ ಪತಿಯನ್ನು ಸುತ್ತುವರೆದಿರುವ ಎಲ್ಲಾ ವಿವಾದಗಳಿಂದ ಬೇಸರಗೊಂಡ ಮೆಲೋನಿ ಪತಿಯಿಂದ ಬೇರ್ಪಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ತನ್ನ ಪತಿ ಆಡುತ್ತಿರುವ ಮಾತುಗಳಿಂದಾಗಿ ನನ್ನನ್ನು ಯಾರೂ ಮುಂದೆ ಪ್ರಶ್ನಿಸಬಾರದು, ಅವನ ನಡವಳಿಕೆಗೆ ನಾನು ಜವಾಬ್ದಾರಳಾಗಿರಬಾರದು ಎಂದು ಈ ಮೂಲಕ ಅವರಿಂದ ಬೇರಾಗುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮೆಲೋನಿ ಸ್ಪಷ್ಟಪಡಿಸಿದ್ದಾರೆ.