ಲೆವಿಸ್ಟನ್, ಅ 26 (DaijiworldNews/MS): ಅಮೆರಿಕಾದ ಲೆವಿಸ್ಟನ್ನಲ್ಲಿ ಭೀಕರ ಗುಂಡಿನ ದಾಳಿ ನಡೆಸಿ 22 ಮಂದಿಯ ಹತ್ಯೆ ಮಾಡಿದ್ದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮೂಹಿಕ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ರಾಬರ್ಟ್ ಕಾರ್ಡ್ (40) ಎಂದು ಗುರುತಿಸಲಾಗಿದೆ. ಈ ಹಿಂದೆಯೂ ಆತನನ್ನು ಕೌಟುಂಬಿಕ ಹಿಂಸಾಚಾರಕ್ಕಾಗಿ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ಸಂಜೆ, ಲೆವಿಸ್ಟನ್ನ ಬಾರ್ ಮತ್ತು ಬೌಲಿಂಗ್ ಅಲ್ಲೆ ಎಂಬಲ್ಲಿ ಗುಂಡಿನ ದಾಳಿ ನಡೆದಿದ್ದು ರಾತ್ರಿ 7.15 ಕ್ಕೆ ಲೇಸರ್ ಆಪ್ಟಿಕ್ನೊಂದಿಗೆ AR 15-ಶೈಲಿಯ ರೈಫಲ್ನೊಂದಿಗೆ ಶಸ್ತ್ರಸಜ್ಜಿತ ರಾಬರ್ಟ್ ಕಾರ್ಡ್ ಮನಸೋಇಚ್ಚೆ ದಾಳಿ ನಡೆಸಿದ್ದ. ಘಟನೆಯಲ್ಲಿ22 ಜನರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದರು. ರಾಬರ್ಟ್ ಕಾರ್ಡ್ ಬಳಿಕ ತಲೆಮರೆಸಿಕೊಂಡಿದ್ದು, ನೂರಾರು ಪೊಲೀಸ್ ಅಧಿಕಾರಿಗಳು ಈತನಿಗಾಗಿ ರಾಜ್ಯದಾದ್ಯಂತ ಹುಡುಕಾಟ ಆರಂಭಿಸಿದ್ದರು.
ರಾಬರ್ಟ್ ಕಾರ್ಡ್ ಹಿಂದೆ ಅಮೆರಿಕಾದ ಮಿಲಿಟರಿಯಲ್ಲಿ ತರಬೇತಿ ಪಡೆದಿದ್ದು ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಗೂ ಒಳಗಾಗಿದ್ದ ಎನ್ನಲಾಗಿದೆ. ಮಿಲಿಟರಿ ತರಬೇತಿ ನೆಲೆಯಲ್ಲಿ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ವಿಚಾರವೂ ಬೆಳಕಿಗೆ ಬಂದಿದೆ.