ಕೈರೋ, ಅ 28 (DaijiworldNews/AK): ಈಜಿಪ್ಟ್ನ ಬೆಹೈರಾ ಗವರ್ನರೇಟ್ನ ಹೆದ್ದಾರಿಯಲ್ಲಿ ಶನಿವಾರ ನಡೆದ ಭೀಕರ ಸರಣಿ ಅವಘಡದಲ್ಲಿ ಕನಿಷ್ಠ 32ಜನರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯ ತಿಳಿಸಿದೆ.ಕೈರೋದಿಂದ ಉತ್ತರಕ್ಕೆ 160 ಕಿಮೀ (82ಮೈಲಿ)ದೂರದಲ್ಲಿರುವ ವಾಡಿ ಅಲ್-ನಾಟ್ರೌನ್ ಬಳಿಯ ಕೈರೋ-ಅಲೆಕ್ಸಾಂಡ್ರಿಯಾ ಮರುಭೂಮಿ ರಸ್ತೆಯಲ್ಲಿ ಭೀಕರ ಅವಘಡ ಸಂಭವಿಸಿದೆ ಎಂದು ವರದಿ ಮಾಡಿದೆ.
ಈಜಿಪ್ಟ್ ರಾಜಧಾನಿ ಕೈರೋ ಮತ್ತು ಮೆಡಿಟರೇನಿಯನ್ ನಗರ ಅಲೆಕ್ಸಾಂಡ್ರಿಯಾವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬೆಳಗಿನ ಮಂಜು ಕವಿದಿದ್ದ ವೇಳೆ ಕೈರೋಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ಸೊಂದು ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಾಗ ಘರ್ಷಣೆ ನಡೆದಿದ್ದು ಈ ವೇಳೆ ಇತರ ಕಾರುಗಳು ಬಸ್ಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ ಎನ್ನಲಾಗಿದೆ. ಒಂದು ಬಸ್ , ಮಿನಿಬಸ್, ಕಾರುಗಳು ಬೆಂಕಿಯಿಂದ ಸುಟ್ಟುಹೋಗಿವೆ ಎಂದು ತಿಳಿದು ಬಂದಿದೆ.