ಟೆಲ್ ಅವೀವ್, ನ. 2 (DaijiworldNews/RA): ಇಸ್ರೇಲ್ ಮೇಲೆ ಮುಗಿ ಬಿದ್ದ ಹಮ್ಮಾಸ್ ಉಗ್ರರ ಸಂಘಟನೆಗೆ ಈಗಾಗಲೇ ಇಸ್ರೇಲ್ ಸೇನೆ ಮಣ್ಣು ಮುಕ್ಕಿಸಿದೆ. ಇತ್ತ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾತಿನಂತೆ ಇಸ್ರೇಲ್ ವಿರುದ್ಧ ಮತ್ತೆ ತೊಡೆ ತಟ್ಟಿರುವ ಹಮ್ಮಾಸ್ ಪಾಠ ಕಲಿಸದೇ ಬಿಡಲ್ಲ ಎಂದು ಸವಾಲು ಹಾಕಿದೆ.
ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಹಮಾಸ್ನ ಹಿರಿಯ ಸದಸ್ಯ ಶ್ಲಾಘಿಸಿ ಇಸ್ರೇಲ್ ಅನ್ನು ನಿರ್ನಾಮ ಮಾಡುವವರೆಗೆ ಭವಿಷ್ಯದಲ್ಲಿ ಅನೇಕ ಬಾರಿ ಇದೇ ರೀತಿಯ ದಾಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾನೆ. ಹಮಾಸ್ನ ರಾಜಕೀಯ ಬ್ಯೂರೋದ ಸದಸ್ಯ ಗಾಜಿ ಹಮದ್ ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಾಳಿ ಕುರಿತು ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾನೆ.
ಈತನ ಹೇಳಿಕೆಯನ್ನು ಅನುವಾದಿಸಿ ಮಿಡಲ್ ಈಸ್ಟ್ ಮೀಡಿಯಾ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಟ ಮಾಡಿದೆ.ಇನ್ನು ಇದಕ್ಕೆ ಪ್ರತಿಯಾಗಿ ಮಾಧ್ಯಮದವರು ನಿಮ್ಮ ಹೇಳಿಕೆ ಇಸ್ರೇಲ್ನ ಸಂಪೂರ್ಣ ವಿನಾಶವನ್ನು ಅರ್ಥೈಸುತ್ತದೆಯೇ ಎಂದು ಪ್ರಶ್ನೆ ಕೇಳಿದಾಗ, ಖಂಡಿತ ಹೌದು. ನಾವು ಇಸ್ರೇಲ್ಗೆ ಪಾಠ ಕಲಿಸಬೇಕು. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹಮಾಸ್ ಸದಸ್ಯ ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ನಮ್ಮ ನೆಲದಲ್ಲಿ ಸ್ಥಾನವಿಲ್ಲದ ದೇಶ ಇಸ್ರೇಲ್. ನಾವು ಅದನ್ನು ತೆಗೆದುಹಾಕಬೇಕು. ಏಕೆಂದರೆ ಇದು ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳಿಗೆ ಭದ್ರತೆ, ಮಿಲಿಟರಿ ಮತ್ತು ರಾಜಕೀಯ ದುರಂತಗಳಿಗೆ ಕಾರಣವಾಗಬಹುದು. ಇದನ್ನು ಹೇಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಇಸ್ರೇಲ್ ಬಗೆಗಿನ ತನ್ನ ನಿಲುವು ವ್ಯಕ್ತಪಡಿಸಿದ್ದಾರೆ. ನಾವು ಬೆಲೆ ತೆರಲು ಸಿದ್ಧರಿದ್ದೇವೆ. ಅಷ್ಟೇ ಅಲ್ಲ ಅದನ್ನು ವಾಪಸ್ ಪಡೆಯುತ್ತೇವೆ. ನಮ್ಮನ್ನು ಹುತಾತ್ಮರ ರಾಷ್ಟ್ರದವರು ಎಂದು ಕರೆಯಲಾಗುತ್ತದೆ. ತ್ಯಾಗ ಮಾಡಲು ನಾವು ಹೆಮ್ಮೆಪಡುತ್ತೇವೆ ಎಂದಿದ್ದಾನೆ.