ತೆಹ್ರಾನ್ , 2 (DaijiworldNews/MR): ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಗೆ ಪ್ರತಿಕ್ರಿಯೆಯಾಗಿ ಆ ದೇಶದ ಜೊತೆ ನಡೆಸುತ್ತಿರುವ ತೈಲ ರಫ್ತು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರಗಳನ್ನು ಸ್ಥಗಿತಗೊಳಿಸಬೇಕೆಂದು ಇರಾನ್ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಮುಸ್ಲಿಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ವಿದ್ಯಾರ್ಥಿಗಳ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಅಪರಾಧಗಳನ್ನು ಎಸಗುವುದನ್ನು ಕೊನೆಗೊಳಿಸುವಂತೆ ಮುಸ್ಲಿಂ ರಾಷ್ಟಗಳ ಸರ್ಕಾರಗಳು ಇಸ್ರೇಲ್ಗೆ ತಾಕೀತು ಮಾಡಬೇಕೆಂದು ಆಗ್ರಹಿಸಿದರು.
ಬ್ರಿಟನ್, ಫ್ರಾನ್ಸ್ ಹಾಗೂ ಅಮೆರಿಕ ಸೇರಿದಂತೆ ಪಾಶ್ಚಾತ್ಯ ಸರ್ಕಾರಗಳು ಫೆಲೆಸ್ತೀನ್ ವಿರುದ್ಧ ನಿಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಸ್ರೇಲ್ ದೇಶವು ಗಾಜಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು ಎಂದರು.
ಯಹೂದಿ ರಾಷ್ಟ್ರಕ್ಕೆ ಮುಸ್ಲಿಂ ದೇಶಗಳಿಂದ ರಫ್ತಾಗುತ್ತಿರುವ ಪೆಟ್ರೋಲಿಯಂ ತೈಲ ಉತ್ಪನ್ನಗಳು ಹಾಗೂ ಆಹಾರ ಉತ್ಪನ್ನಗಳ ಸರಬರಾಜು ನಿಲ್ಲಬೇಕು ಎಂದು ಅಯತೊಲ್ಲಾ ಅಲಿ ಖಮೇನಿ ಹೇಳಿದರು.
ಇದೇ ವೇಳೆ ಮುಸ್ಲಿಂ ರಾಷ್ಟ್ರಗಳು, ಇಸ್ರೇಲ್ಗೆ ಆರ್ಥಿಕವಾಗಿ ಸಹಕರಿಸಬಾರದು. ತೈಲ ಮತ್ತು ಆಹಾರ ರಫ್ತಿನ ಮೇಲೆ ನಿರ್ಬಂಧ ವಿಧಿಸಬೇಕು ಎಂದು ರಕ್ಷಣಾ ಸಚಿವ ಮುಹಮ್ಮದ್ ರೆಝಾ ಎಚ್ಚರಿಕೆ ನೀಡಿದ್ದಾರೆ.