ಇಸ್ಲಾಮಾಬಾದ್, ನ 2 (DaijiworldNews/AA): ಪಾಕಿಸ್ತಾನದಲ್ಲಿ ಹಲವಾರು ಅಫ್ಘಾನಿಸ್ತಾನದ ನಾಗರಿಕರು ನೆಲೆಸಿದ್ದು, ಇದೀಗ ಪಾಕಿಸ್ತಾನದ ಭದ್ರತಾ ಪಡೆಗಳು ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಬಂಧಿಸಿ ಗಡಿಪಾರು ಮಾಡುವಲ್ಲಿ ನಿರತರಾಗಿದ್ದಾರೆ.
ಈ ಹಿಂದೆ ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಘಾನಿಸ್ತಾನ ನಿರಾಶ್ರಿತರಿಗೆ ತಮ್ಮ ದೇಶಕ್ಕೆ ಮರಳಲು ಗಡುವು ನೀಡಲಾಗಿತ್ತು. ಇದೀಗ ಈ ಗಡುವು ಅಂತ್ಯಗೊಂಡ ಹಿನ್ನೆಲೆ ಪಾಕಿಸ್ತಾನ ಸರ್ಕಾರ ಹೊಸದಾಗಿ ವಲಸಿಗರ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಿದೆ.ಹೀಗಾಗಿ ದೇಶದಲ್ಲಿ ನೆಲೆಸಿರುವ ದಾಖಲಾಗದ ಅಥವಾ ನೋಂದಣಿಯಾಗದ ಎಲ್ಲಾ ವಿದೇಶಿಗರನ್ನು ದೇಶದಿಂದ ಹೊರಹಾಕಲಾಗುತ್ತಿದೆ.
ಇನ್ನು ಪಾಕಿಸ್ತಾನ ಜಾರಿಗೊಳಿಸಿರುವ ಈ ನೀತಿಯಿಂದ ಅಲ್ಲಿ ವಾಸಿಸುತ್ತಿರುವ ಸುಮಾರು 20 ಲಕ್ಷ ಅಫ್ಘನ್ನರಿಗೆ ಆಪತ್ತು ಎದುರಾಗಿದೆ.ಪಾಕಿಸ್ತಾನ ಪಾಲಿಸುತ್ತಿರುವ ಈ ನೀತಿಗೆ ವಿಶ್ವಸಂಸ್ಥೆಯ ವಿಭಾಗಗಳು, ಮಾನವ ಹಕ್ಕು ಸಂಘಟನೆಗಳು ಹಾಗೂ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಆಡಳಿತವು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸಿವೆ.
ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪಾಕಿಸ್ತಾನದ ಹಂಗಾಮಿ ಒಳಾಡಳಿತ ಸಚಿವ ಸರ್ಫರಾಜ್ ಅವರು "ಪಾಕಿಸ್ತಾನದಲ್ಲಿ ಗಡಿಪಾರು ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.
ಇಂದು ನಾವು 64 ಅಫ್ಘಾನಿಸ್ತಾನರಿಗೆ ವಿದಾಯ ಹೇಳಿದ್ದೇವೆ. ಅವರು ಮನೆಗೆ ಹೋಗುವ ಪ್ರಯಾಣ ಪ್ರಾರಂಭವಾಗಿದೆ. ಸೂಕ್ತ ದಾಖಲೆಗಳಿಲ್ಲದೆ ದೇಶದಲ್ಲಿ ನೆಲೆಸಿರುವವರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಪಾಕಿಸ್ತಾನದ ದೃಢ ನಿರ್ಧಾರಕ್ಕೆ ಇದು ಸಾಕ್ಷಿ" ಎಂದು ಹೇಳಿದ್ದಾರೆ.