ಬರ್ಲಿನ್, ನ.13 (DaijiworldNews/SK): ಅಮೆರಿಕದ ಸೇನಾಪಡೆಗೆ ಸೇರಿದ ತರಬೇತಿ ನಿರತ ಹೆಲಿಕಾಪ್ಟರ್ ವೊಂದು ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ವಿಮಾನದಲಿದ್ದ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಅವಘಡ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ವಾಯುಪಡೆಯ ವಿಮಾನಗಳು ಮತ್ತು ನೌಕಾಪಡೆಯ ನೌಕೆಗಳ ನೆರವಿನಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿದ್ದು, ವಿಮಾನ ಪತನದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಹೆಲಿಕಾಪ್ಟರ್ನಲ್ಲಿದ್ದವರು ಅಮೆರಿಕ ಮಿಲಿಟರಿಯ ತರಬೇತಿಯ ಭಾಗವಾಗಿ ಆಗಸದಲ್ಲಿಯೇ ಇಂಧನ ತುಂಬುವ ಕಾರ್ಯಾಚರಣೆಯ ಸಿಬ್ಬಂದಿಯಾಗಿದ್ದರು.
ಇನ್ನು ಸೇನಾ ಸದಸ್ಯರ ಕುಟುಂಬಗಳಿಗೆ ಗೌರವ ಮತ್ತು ರಕ್ಷಣಾ ಇಲಾಖೆಯ ನೀತಿಗೆ ಅನುಸಾರವಾಗಿ ಮೃತರ ಕುಟುಂಬಗಳಿಗೆ ಮಾಹಿತಿ ತಿಳಿಸುವವರೆಗೆ ಮೃತ ಸಿಬ್ಬಂದಿಯ ಗುರುತನ್ನು 24 ಗಂಟೆಗಳಲ್ಲಿ ಬಹಿರಂಗಗೊಳಿಸುವುದಿಲ್ಲ ಎಂದು ಯುರೋಪಿಯನ್ ಕಮಾಂಡ್ ಹೇಳಿಕೆ ನೀಡಿದ್ದಾರೆ.