ಲಂಡನ್, ನ 13 (DaijiworldNews/MR): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಸಂಪುಟದ ಸದಸ್ಯೆ ಸುವೆಲ್ಲಾ ಬ್ರೇವರ್ಮನ್ ಅವರನ್ನು ವಜಾಗೊಳಿಸಿದ್ದಾರೆ. ಸುವೆಲ್ಲಾ ಬ್ರೇವರ್ಮನ್ ಅವರು ಸುನಕ್ ಸಂಪುಟದ ಹಿರಿಯ ಸಚಿವೆಯಾಗಿದ್ದರು. ರಿಷಿ ಸುನಕ್ ಹಾಗೂ ಸುವೆಲ್ಲಾ ಬ್ರೇವರ್ಮನ್ ಭಾರತ ಮೂಲದವರಾಗಿದ್ದು, ಇಬ್ಬರ ಮಧ್ಯೆ ಆತ್ಮೀಯತೆ ಇತ್ತು. ಆದರೀಗ, ಸುವೆಲ್ಲಾ ಬ್ರೇವರ್ಮನ್ ವಿರುದ್ಧ ಬ್ರಿಟನ್ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಬ್ರಿಟನ್ನ ಹಲವೆಡೆ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಸುವೆಲ್ಲಾ ಬ್ರೇವರ್ಮನ್ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಸುವೆಲ್ಲಾ ಬ್ರೇವರ್ಮನ್ ವಿರುದ್ಧ ಬ್ರಿಟನ್ನ ಕೆಲವೆಡೆ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ರಿಷಿ ಸುನಕ್ ಅವರ ಮೇಲೆ ಒತ್ತಡ ಹೇರಲಾಗಿತ್ತು. ಹಾಗಾಗಿ ರಿಷಿ ಸುನಕ್ ಅವರು ಸುವೆಲ್ಲಾ ಬ್ರೇವರ್ಮನ್ ಅವರನ್ನು ವಜಾಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆರ್ಮಿಸ್ಟೈಸ್ ಡೇ ಹಿನ್ನೆಲೆಯಲ್ಲಿ ಶನಿವಾರ ಪ್ಯಾಲೆಸ್ತೀನ್ ಪರವಾಗಿ ಲಂಡನ್ ಸೇರಿ ಹಲವೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದರ ಕುರಿತು ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಸುವೆಲ್ಲಾ ಬ್ರೇವರ್ಮನ್ ಪೊಲೀಸರ ನಡೆಯನ್ನು ಟೀಕಿಸಿದ್ದರು. ಲಂಡನ್ ಪೊಲೀಸರ ದಕ್ಷತೆ ಕುರಿತು ಸುವೆಲ್ಲಾ ಬ್ರೇವರ್ಮನ್ ಅವರ ಲೇಖನ ಪ್ರಕಟವಾದ ಬಳಿಕ ಭಾರಿ ವಿವಾದ ಸೃಷ್ಟಿಯಾಗಿತ್ತು.
ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಿಷಿ ಸುನಕ್ ಅವರ ಮೇಲೆ ಒತ್ತಡ ಹೇರಿದ್ದರು. ಪ್ರತಿಭಟನೆ ಹಾಗೂ ಒತ್ತಡಗಳಿಂದಾಗಿ ರಿಷಿ ಸುನಕ್ ಅವರು ಸುವೆಲ್ಲಾ ಬ್ರೇವರ್ಮನ್ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.