ಬೀಜಿಂಗ್: ನ 23 (DaijiworldNews/MR): ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ.
ಚೀನಾದಲ್ಲಿ ಏಕಾಏಕಿ ನಿಗೂಢವಾದ ನ್ಯುಮೋನಿಯಾ ಪ್ರಕರಣ ಹೆಚ್ಚಳವಾಗಿದೆ. ನರ್ಸರಿ, ಶಾಲೆಗಳಲ್ಲಿ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ.
ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸುವುತ್ತಿರುವುದಾಗಿ ವರದಿಯಾಗಿದೆ.
ಶಾಲಾ ಮಕ್ಕಳಲ್ಲಿ ನಿಗೂಢ ನ್ಯುಮೋನಿಯಾ ಸೋಂಕಿನ ಹೆಚ್ಚಳ, ಹೀಗಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಚೀನಾದಿಂದ ವಿವರವಾದ ವರದಿಯನ್ನು ಕೋರಿದೆ.
ಬೀಜಿಂಗ್ ಮತ್ತು ಲಿಯಾನಿಂಗ್ನಲ್ಲಿರುವ ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿ ತುಳುಕುತ್ತಿದ್ದು, ವೈದ್ಯರು ಚಿಕಿತ್ಸೆ ನೀಡಲು ಅಗತ್ಯವಾದ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಏಕಾಏಕಿ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ.
ಮಕ್ಕಳು ಶ್ವಾಸಕೋಶದ ಉರಿಯೂತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತಾರೆ. ಆದರೆ ಕೆಮ್ಮು, ಜ್ವರ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ.
ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.