ಕೌಲಾಲಂಪುರ್, ನ 27(DaijiworldNews/SK): ಶ್ರೀಲಂಕಾ ಮತ್ತು ಥಾಯ್ಲೆಂಡ್ ಬಳಿಕ ಇದೀಗ ಮಲೇಷ್ಯಾ ಕೂಡ ಭಾರತೀಯ ನಾಗರಿಕರಿಗೆ ವೀಸಾ ಮುಕ್ತ ಪ್ರವೇಶ ಅವಕಾಶವನ್ನು ಕಲ್ಪಿಸಿದೆ. ಈ ವಿಚಾರವನ್ನು ಸ್ವತಃ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಘೋಷಿಸಿದ್ದಾರೆ.
ಈ ಉಪಕ್ರಮವು ಡಿಸೆಂಬರ್ 1 ರಿಂದ ಆರಂಭವಾಗಲಿದ್ದು, ಆದರೆ ವೀಸಾ ವಿನಾಯಿತು ಯಾವ ದಿನಾಂಕದವರೆಗೆ ಅನ್ವಯಿಸುತ್ತದೆ ಎಂಬುದನ್ನು ತಿಳಿಸಿಲ್ಲ. ಪ್ರಸ್ತುತ, ಚೀನಾ ಮತ್ತು ಭಾರತೀಯ ಪ್ರಜೆಗಳು ಮಲೇಷ್ಯಾ ಪ್ರವೇಶಿಸುವ ಮೊದಲು ವೀಸಾಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇನ್ನು ಸರ್ಕಾರದ ವರದಿಯ ಪ್ರಕಾರ, ಜನವರಿ ಮತ್ತು ಜೂನ್ ನಡುವೆ 9.16 ಮಿಲಿಯನ್ ಪ್ರವಾಸಿಗರು ಮಲೇಷ್ಯಾಕ್ಕೆ ಭೇಟಿ ನೀಡಿದ್ದಾರೆ. ಚೀನಾದಿಂದ 498,540 ಮತ್ತು ಭಾರತದಿಂದ 283,885 ಪ್ರವಾಸಿಗರು ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಭಾರತೀಯರು ಈಗಾಗಲೇ ಥೈಲ್ಯಾಂಡ್ ಮತ್ತು ಶ್ರೀಲಂಕಾದಲ್ಲಿ ವೀಸಾ ಮುಕ್ತ ಪ್ರವೇಶವನ್ನು ಪಡೆಯುತ್ತಿದ್ದಾರೆ. ಇದೀಗ ಮಲೇಷ್ಯಾಕ್ಕೂ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿರುವುದು ಪ್ರವಾಸಿಗರಿಗೆ ಸಂತಸ ತಂದಿದೆ.