ಮಾಸ್ಕೋ, ಡಿ 01 (DaijiworldNews/AA): ರಷ್ಯಾದ ಜನಸಂಖ್ಯೆ ಹೆಚ್ಚಿಸಲು ರಷ್ಯಾದ ಮಹಿಳೆಯರು 8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ.
ಮಾಸ್ಕೋದಲ್ಲಿ ನಡೆದ ವಿಶ್ವ ರಷ್ಯಾದ ಪೀಪಲ್ಸ್ ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ಅವರು, ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದ ಕುಸಿಯುತ್ತಿದ್ದು, ಮುಂಬರುವ ದಶಕಗಳಲ್ಲಿ ರಷ್ಯಾದ ಜನಸಂಖ್ಯೆ ಏರಿಕೆ ಮಾಡುವುದು ನಮ್ಮ ಗುರಿಯಾಗಿದೆ. ರಷ್ಯಾ - ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ದೇಶದಲ್ಲಿ 3,00,000ಕ್ಕೂ ಅಧಿಕ ಸಾವು - ನೋವುಗಳಾಗಿವೆ ಎಂದರು.
ನಮ್ಮ ದೇಶದ ಅನೇಕ ಜನಾಂಗದವರು 4 ಅಥವಾ 5 ಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಮೂಲಕ ಸುಭದ್ರ ಕುಟುಂಬ ಹೊಂದುತ್ತಿದ್ದರು. ನಮ್ಮ ಅಜ್ಜಿ, ಮುತ್ತಜ್ಜಿಯರು 7, 8 ಹಾಗೂ ಅದಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದರು. ನಾವು ಉತ್ತಮ ಸಂಪ್ರದಾಯವನ್ನು ರಕ್ಷಿಸಬೇಕು. ನಾವು ದೊಡ್ಡ ಕುಟುಂಬಗಳನ್ನು ರೂಢಿ ಮಾಡಿಕೊಳ್ಳಬೇಕು. ಮುಂದಿನ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ದೇಶದ ಜನಸಂಖ್ಯೆ ರಕ್ಷಿಸುವುದು ಹಾಗೂ ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಇದು ರಷ್ಯಾ ದೇಶದ ಭವಿಷ್ಯಕ್ಕೆ ಅಗತ್ಯವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.