ಫಿಲಿಪೈನ್ಸ್, ಡಿ 06 (DaijiworldNews/AA): 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬ್ರೇಕ್ ಫೇಲ್ ಆಗಿ 100 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 17 ಮಂದಿ ಪ್ರಯಾಣಿಕರು ಸಾವನ್ನಪ್ಪಿದ ಘಟನೆ ಫಿಲಿಪೈನ್ಸ್ನಲ್ಲಿ ಮಂಗಳವಾರ ನಡೆದಿದೆ.
ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಎಂಟು ಮಂದಿ ಸ್ಥಿತಿ ಗಂಭೀರವಾಗಿದೆ. ನಾಲ್ವರ ಆರೋಗ್ಯ ಸ್ಥಿರವಾಗಿದೆ. ಬಸ್ ನಲ್ಲಿ ಒಟ್ಟು 53 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ, ಈ ಬಗ್ಗೆ ಪರಿಶೀಲಿಸಬೇಕಿದೆ. ರಸ್ತೆಯ ವಿನ್ಯಾಸವು ದೋಷಪೂರಿತವಾಗಿರಬಹುದು ಹೀಗಾಗಿ ಲೋಕೋಪಯೋಗಿ ಮತ್ತು ಹೆದ್ದಾರಿಗಳ ಇಲಾಖೆಯ ಗಮನಕ್ಕೆ ತಂದಿದ್ದೇವೆ ಎಂದು ಆಂಟಿಕ್ ಗವರ್ನರ್ ರೋಡೋರಾ ಕ್ಯಾಡಿಯಾವೊ ಅವರು ಮಾಹಿತಿ ನೀಡಿದ್ದಾರೆ.
ಇಲಾಯ್ಲೋ ಪ್ರಾಂತ್ಯದಿಂದ ಆಂಟಿಕಲ್ ಕುಲಾಸಿ ಪಟ್ಟಣಕ್ಕೆ ಮಂಗಳವಾರ ಮಧ್ಯಾಹ್ನ ತೆರಳುತ್ತಿದ್ದ ಬಸ್ ನ ಬ್ರೇಕ್ ಫೇಲಾಗಿತ್ತು. ಪರಿಣಾಮ ಬಸ್ 98.5 ಅಡಿ ಆಳದ ಕಂದಕಕ್ಕೆ ಬಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ನಾಲ್ವರು ಕೀನ್ಯಾದ ಪ್ರಜೆಯಾಗಿದ್ದರು ಎನ್ನಲಾಗಿದೆ.
ಇನ್ನು ಅಪಘಾತವಾದ ಪ್ರದೇಶದಲ್ಲಿ ನಿರಂತರವಾಗಿ ಇಂತಹ ಅನೇಕ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕೆಲವೇ ದಿನಗಳ ಅಂತರದಲ್ಲಿ ಬಿದ್ದ ಎರಡನೇ ಬಸ್ ಇದಾಗಿದೆ ಎಂದು ತಿಳಿದುಬಂದಿದೆ.