ಜೆರುಸೆಲಂ, ಡಿ13 (DaijiworldNews/MR): ಗಾಜಾದಲ್ಲಿ ಬಂಧಿಸಲಾದ 135 ಒತ್ತೆಯಾಳುಗಳ ಪೈಕಿ ಮತ್ತಿಬ್ಬರು ಮೃತಪಟ್ಟಿದ್ದು, ಹೀಗಾಗಿ ಸಾವಿನಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಇಸ್ರೇಲ್ ತಿಳಿಸಿದೆ.
ಗಾಜಾದಲ್ಲಿ ಇಬ್ಬರು ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿದ್ದು, ಅವರನ್ನು ಮಂಗಳವಾರ ಇಸ್ರೇಲ್ ಗೆ ಮರಳಿ ಕರೆತರಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಮಾಹಿತಿ ನೀಡಿದೆ. ಮೃತಪಟ್ಟವರನ್ನು ಈಡನ್ ಜಕಾರಿಯಾ (27) ಮತ್ತು ಜಿವ್ ಡಾಡೋ (36) ಎಂದು ಗುರುತಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.
ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಐಡಿಎಫ್ ಹೇಳಿದೆ, ಇನ್ನೂ ಇಬ್ಬರು ಒತ್ತೆಯಾಳುಗಳ ಶವಗಳು ಪತ್ತೆಯಾಗಿದೆ ಎಂದು ಇಸ್ರೇಲ್ ಮಾಹಿತಿ ನೀಡಿದೆ. ಕಳೆದ ತಿಂಗಳು ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಸಮಯದಲ್ಲಿ ಸುಮಾರು 100 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು.
U.S., ಈಜಿಪ್ಟ್ ಮತ್ತು ಕತಾರ್ಗಳ ಸಹಾಯದಿಂದ ಮಾತುಕತೆ ನಡೆಸಿದ ಈ ಒಪ್ಪಂದವನ್ನು ಆರಂಭದಲ್ಲಿ ನಾಲ್ಕು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿತ್ತು ಆದರೆ ಅದನ್ನು ಏಳು ದಿನಗಳವರೆಗೆ ವಿಸ್ತರಿಸಲಾಯಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಲ್ಲಿದ್ದ ಸುಮಾರು 240 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ ಹಮಾಸ್ ಸಂಘರ್ಷಕ್ಕೆ ಮಾನವೀಯ ಕದನ ವಿರಾಮವನ್ನು ಘೋಷಿಸಲು ಮತ್ತು ಒತ್ತೆಯಾಳುಗಳ ಬೇಷರತ್ ಬಿಡುಗಡೆಗೆ ಒತ್ತಾಯಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕರಡು ನಿರ್ಣಯದ ಪರ ಭಾರತ ಮತ ಚಲಾಯಿಸಿದೆ.