ಜಿಂಬಾಬ್ವೆ: ಜಿಂಬಾಬ್ವೆಯಲ್ಲಿ ತೀವ್ರ ಬರಗಾಲ ಉಂಟಾಗಿದ್ದು ಅಲ್ಲಿನ ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚಿನ ವಾರಗಳಲ್ಲಿ ಕನಿಷ್ಠ 100 ಆನೆಗಳು ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದಕ್ಷಿಣ ಆಫ್ರಿಕಾದ ರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಮತ್ತು ಹೆಚ್ಚುತ್ತಿರುವ ಶಾಖದಿಂದಾಗಿ ಮತ್ತಷ್ಟು ಪ್ರಾಣಿಪಕ್ಷಿಗಳು ಸಾಯಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ವಯಸ್ಸಾದ ಮತ್ತು ಅನಾರೋಗ್ಯದ ತುತ್ತಾದ ಹಾಗೂ ಮರಿ ಅನೆಗಳು ನೀರನ್ನು ಹುಡುಕಲು ದೂರದವರೆಗೆ ಪ್ರಯಾಣಿಸಲು ಸಾಧ್ಯವಿಲ್ಲ.ಆದ್ದರಿಂದ ನೀರಿನ ಕೊರತೆಯುಂಟಾಗಿ ಆನೆಗಳು ಸಾಯುತ್ತಿವೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಬರದಿಂದಾಗಿ 2019 ರಲ್ಲಿ ಇನ್ನೂರು ಆನೆಗಳು ಸಾವನ್ನಪ್ಪಿತ್ತು.
45 ಸಾವಿರ ಆನೆಗಳು, 100ಕ್ಕೂ ಅಧಿಕ ಸಸ್ತನಿಗಳು, 400ಕ್ಕೂ ಅಧಿಕ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಾಣಿಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಾಧಾರಣ ವಯಸ್ಸಿನ ಆನೆಗೆ ಪ್ರತೀ ದಿನಕ್ಕೆ 200 ಲೀಟರ್ ನೀರು ಬೇಕಾಗುತ್ತದೆ.
ಆನೆಗಳನ್ನು ಉಳಿಸಿಕೊಳ್ಳುವುದು ಕೇವಲ ಪ್ರಾಣಿಗಳ ರಕ್ಷಣೆಗಾಗಿ ಮಾತ್ರವಲ್ಲ, ಪರಿಸರ ವ್ಯವಸ್ಥೆಯಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿ ಆನೆಗಳು ಪ್ರಮುಖ ಮಿತ್ರರಾಗಿದೆ. ಸಸ್ಯ ಬೀಜಗಳನ್ನು ಒಳಗೊಂಡಿರುವ ಲದ್ದಿ ಮೂಲಕ ಸಸ್ಯವರ್ಗವನ್ನು ದೂರದವರೆಗೆ ಹರಡಿ, ಕಾಡುಗಳನ್ನು ಹರಡಲು, ಪುನರುತ್ಪಾದಿಸಲು ಮತ್ತು ಪ್ರವರ್ಧಮಾನಕ್ಕೆ ತರಲು ಅನುವು ಮಾಡಿಕೊಡುತ್ತದೆ. ಮರು ಅರಣ್ಯೀಕರಣದಲ್ಲಿ ಆನೆಗಳು ಮಾನವರಿಗಿಂತ ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಸಂರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.