ಪ್ರೇಗ್, ಡಿ.22 (DaijiworlsNews/MR): ಜೆಕ್ ಗಣರಾಜ್ಯದ ಪ್ರೇಗ್ನ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಡೇವಿಡ್ ಕೊಜಾಕ್ ತನ್ನ ಸಹಪಾಠಿಗಳನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆಗೂ ಮೊದಲೇ ಸ್ವಂತ ತಂದೆಯನ್ನು ಮನೆಯಲ್ಲಿಯೇ ಹತ್ಯೆ ಮಾಡಿ ಬಳಿಕ ವಿಶ್ವವಿದ್ಯಾಲಯದಲ್ಲಿ15 ಮಂದಿಯನ್ನು ಹತ್ಯೆ ಮಾಡಿದ್ದಾನೆ.
ಪ್ರೇಗ್ ವಿಶ್ವವಿದ್ಯಾನಿಲಯದಲ್ಲಿ ಡೇವಿಡ್ ಕೋಜಾಕ್ ತನ್ನ ಸಹ ವಿದ್ಯಾರ್ಥಿಗಳ ಮೇಲೆ ಏಕೆ ಗುಂಡು ಹಾರಿಸಲು ಯತ್ನಿಸಿದನು ಎಂಬುದು ತಿಳಿದಿಲ್ಲ. ಅದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್ಗೆ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧವಿದೆ ಎಂಬುದಕ್ಕೆ ಯಾವುದೇ ಲಕ್ಷಣಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಗ್ ನ ಸ್ಥಳೀಯ ಮಾಧ್ಯಮಗಳ ಪ್ರಕಾರ ಆರೋಪಿ ಡೇವಿಡ್ ಕೋಜಾಕ್ನ ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಆತನ ವ್ಯತಿರಿಕ್ತ ವರ್ತನೆಗೆ ಸುಳಿವು ನೀಡುವಂತಿವೆ. ದಾಳಿಗೆ ಮುನ್ನ ಆತ ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಸಾಮೂಹಿಕ ಹತ್ಯೆ ಮಾಡುವ ರೀತಿಯ ವಿಚಾರಗಳನ್ನು ಪ್ರಸ್ತಾಪಿಸಿದ್ದನೆನ್ನಲಾಗಿದೆ.