ವಾಷಿಂಗ್ಟನ್, ಡಿ 24(DaijiworldNews/SK): ಸೌದಿ ಅರೇಬಿಯಾದಿಂದ ಹೊರಟು ಮಂಗಳೂರು ಕಡೆಗೆ ಬರುತ್ತಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಶನಿವಾರ ಡ್ರೋನ್ ದಾಳಿ ನಡೆದಿದ್ದು, ನಿನ್ನೆ ಅಪ್ಪಳಿಸಿದ ಡ್ರೋನ್ ಅನ್ನು ಇರಾನ್ನಿಂದ ಹಾರಿಸಲಾಗಿದೆ ಎಂದು ಅಮೆರಿಕದ ಭದ್ರತಾ ಸಂಸ್ಥೆ ಪೆಂಟಗನ್ ಹೇಳಿದೆ
ಅರಬ್ಬಿ ಸಮುದ್ರದ ಗುಜರಾತ್ನ ಪೋರಬಂದರ್ ಕರಾವಳಿಯಲ್ಲಿ ಶನಿವಾರ ಸುಮಾರು 20 ಭಾರತೀಯ ಸಿಬ್ಬಂದಿ ಇದ್ದ ಕಚ್ಚಾ ತೈಲದ ಹಡಗಿಗೆ ಡ್ರೋನ್ ದಾಳಿ ನಡೆದಿತ್ತು. ಜಪಾನ್ ಒಡೆತನದ ಹಡಗು ಇದಾಗಿದ್ದು, ದಾಳಿಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಪೆಂಟಗನ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ವ್ಯಾಪಾರಿ ಹಡಗು ಡಿ. 19 ರಂದು ಯುಎಇಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಡಿಸೆಂಬರ್ 25 ರಂದು ನವ ಮಂಗಳೂರು ಬಂದರಿಗೆ ತಲುಪಬೇಕಿತ್ತು ಆದರೆ ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸದ್ಯ ಬೆಂಕಿಯನ್ನು ನಂದಿಸಲಾಗಿದ್ದರೂ ಹಡಗಿನ ಒಟ್ಟಾರೆ ಕಾರ್ಯನಿರ್ವಹಣೆಗೆ ತೊಡಕಾಗಿದೆ.
ಇನ್ನು ಸ್ಟೀರಿಂಗ್ ಸಮಸ್ಯೆಗಳ ಕಾರಣ ಬೆಂಗಾವಲು ಸಹಾಯವನ್ನು ಕೋರಿದೆ. ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಿದೆ. ಅಲ್ಲದೇ ತೊಂದರೆಯಲ್ಲಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆ ಆ ಪ್ರದೇಶದಲ್ಲಿನ ಎಲ್ಲಾ ಹಡಗುಗಳಿಗೆ ಸೂಚನೆ ನೀಡಿದೆ.