ಇಸ್ಲಾಮಾಬಾದ್, ಡಿ 26 (DaijiworldNews/AA): 2024 ರ ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಮೊದಲ ಬಾರಿಗೆ ಹಿಂದೂ ಯುವತಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಲ್ಲಿ ಸವೀರಾ ಪ್ರಕಾಶ್ ಎಂಬ ಹಿಂದೂ ಮಹಿಳೆ PK-25 ರ ಸಾಮಾನ್ಯ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್ನಲ್ಲಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾರೆ.
ಸವೀರಾ ಪ್ರಕಾಶ್ ತಂದೆ ನಿವೃತ್ತ ವೈದ್ಯರಾಗಿದ್ದು, ಅವರು ಕಳೆದ 35 ವರ್ಷಗಳಿಂದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸದಸ್ಯರಾಗಿದ್ದಾರೆ. ಇದೀಗ ಸವೀರಾ ಅವರು ಸಹ ತನ್ನ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ. ಸವೀರಾ ಅವರು ಸಾಮಾನ್ಯ ಸ್ಥಾನಕ್ಕೆ ಬುನೇರ್ ಜಿಲ್ಲೆಯಿಂದ ನಾಮಪತ್ರ ಸಲ್ಲಿಸಿದ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ ಎಂದು ಸ್ಥಳೀಯ ರಾಜಕಾರಣಿ ಸಲೀಂ ಖಾನ್ ತಿಳಿಸಿದ್ದಾರೆ.