ಸಿಯೋಲ್, ಜ 2 (DaijiworldNews/SK): ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ-ಮ್ಯುಂಗ್ ಅವರಿಗೆ ದುಷ್ಕರ್ಮಿಯೊಬ್ಬ ಕುತ್ತಿಗೆಗೆ ಚೂರಿ ಇರಿದ ಘಟನೆ ದಕ್ಷಿಣ ಕೊರಿಯಾದ ಬಂದರು ನಗರವಾದ ಬುಸಾನ್ನಲ್ಲಿ ನಡೆದಿದೆ.
ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರು ಬುಸಾನ್ನ ಗಡೆಯೊಕ್ ದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ದುಷ್ಕರ್ಮಿಯು ಹರಿತವಾದ ಚೂರಿಯಿಂದ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣ ಸುತ್ತಮುತ್ತ ನೆರೆದಿದ್ದವರು, ಮ್ಯುಂಗ್ಗೆ ಸಹಾಯ ಮಾಡಲು ಮುಂದಾಗಿ ನೆಲದ ಮೇಲೆ ಬಿದ್ದಿದ್ದ ಲೀ ಜೇ-ಮ್ಯುಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಯೋನ್ ಹಾಪ್ ವರದಿ ಮಾಡಿದೆ.
ಇದರಿಂದಾಗಿ ಮ್ಯೂಂಗ್ ಅವರ ಕುತ್ತಿಗೆಯ ಎಡಭಾಗಕ್ಕೆ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ದುಷ್ಕರ್ಮಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ತಮ್ಮ ಪ್ರತಿಸ್ಪರ್ಧಿಯ ಮೇಲೆ ನಡೆದ ಮಾರಣಾಂತಿಕ ದಾಳಿಯ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.