ಟೋಕಿಯೊ, ಡಿ 03 (DaijiworldNews/AK): ಜಪಾನ್ನಲ್ಲಿ ನಡೆದ ಪ್ರಬಲ ಭೂಕಂಪದಿಂದಾಗಿ 62 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೀಗ ಭೂಕಂಪದ ಬಳಿಕ ಭೂಕುಸಿತಗಳು ಮತ್ತು ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಮೂನ್ಸೂಚನೆ ನೀಡಿದ್ದಾರೆ.
ಭೂಕಂಪದಿಂದ ಜಪಾನ್ ತತ್ತರಿಸಿದ್ದು, 62 ಜನರು ಸಾವನ್ನಪ್ಪಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದೆ. 31,800 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.
ಜ. 1 ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪವು, ಹೊನ್ಶು ಮುಖ್ಯ ದ್ವೀಪದ ಇಶಿಕಾವಾ ಪ್ರಾಂತ್ಯದಲ್ಲಿ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹುಟ್ಟುಹಾಕಿತು.ನೂರಾರು ಕಟ್ಟಡಗಳು ಬೆಂಕಿಯಿಂದ ಭಸ್ಮವಾಗಿದೆ. ವಾಜಿಮಾ, ಸುಜು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಮನೆಗಳನ್ನು ನೆಲಸಮವಾಗಿ ಬಿಟ್ಟಿದೆ. ಪ್ರಮುಖವಾಗಿ ಪ್ರಿಫೆಕ್ಚರ್ನ ನೋಟೊ ಪೆನಿನ್ಸುಲಾವು ತೀವ್ರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ವಿಪತ್ತು ಸಂಭವಿಸಿ 40 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ರಕ್ಷಣೆಯ ಅಗತ್ಯವಿರುವ ಜನರ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಬಂದಿದೆ. ಸಹಾಯಕ್ಕಾಗಿ ಜನರು ಕಾಯುತ್ತಿದ್ದಾರೆ ಎಂದು ತುರ್ತು ಕಾರ್ಯಪಡೆ ಸಭೆಯ ನಂತರ ಪ್ರಧಾನಿ ಫುಮಿಯೊ ಕಿಶಿಡಾ ತಿಳಿಸಿದ್ದಾರೆ.