ಮಾಲ್ಡೀವ್ಸ್, ಜ 08 (DaijiworldNews/MS): ಭಾರತದೊಂದಿಗಿನ ಬಾಂಧವ್ಯ ಹಳಸಿರುವ ಬೆನ್ನಲ್ಲೇ ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಚೀನಾಕ್ಕೆ ಹಾರಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಮುಯಿಝು ಅವರು ತಮ್ಮ ಪತ್ನಿ ಸಾಜಿದಾ ಮೊಹಮ್ಮದ್ ಅವರೊಂದಿಗೆ ಅಧಿಕೃತ ರಾಜ್ಯ ಭೇಟಿಗಾಗಿ ಭಾನುವಾರ ರಾತ್ರಿ ಚೀನಾಕ್ಕೆ ತೆರಳಿದ್ದಾರೆ. ಚೀನಾ ಪರ ಒಲವುಳ್ಳ ನಾಯಕನಾಗಿ ಪರಿಗಣಿಸಲ್ಪಟ್ಟಿರುವ ಮುಯಿಝು ಬೀಜಿಂಗ್ಗೆ ದ್ವಿಪಕ್ಷೀಯ ಭೇಟಿಗಾಗಿ ಪ್ರವಾಸ ಬೆಳೆಸಿದ್ದಾರೆ
ಭೇಟಿಯ ಸಮಯದಲ್ಲಿ, ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಮತ್ತು ಕ್ಸಿ ಸ್ವಾಗತ ಸಮಾರಂಭ ಮತ್ತು ಮುಯಿಝುಗೆ ಸ್ವಾಗತ ಔತಣಕೂಟವನ್ನು ಆಯೋಜಿಸಲಿದ್ದಾರೆ. ಉಭಯ ಅಧ್ಯಕ್ಷರು ಮಾತುಕತೆ ನಡೆಸಲಿದ್ದು, ದ್ವಿಪಕ್ಷೀಯ ಸಹಕಾರ ದಾಖಲೆಗಳ ಸಹಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಲ್ಡೀವ್ಸ್ ನಿಂದ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಭಾರತದೊಂದಿಗಿನ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ನಡುವೆ ಮಾಲ್ಡೀವ್ಸ್ ಅಧ್ಯಕ್ಷ ಚೀನಾಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ.
ಮಾಲ್ಡೀ ವ್ಸ್ನಲ್ಲಿ ಸೇನಾ ಪಡೆಯನ್ನು ಹೊಂದಿರುವ ಏಕೈಕ ವಿದೇಶವೆಂದರೆ ಅದು ಭಾರತ. ತನ್ನ ವಿಶಾಲ ಕಡಲ ಪ್ರದೇಶದಲ್ಲಿ ಗಸ್ತು ನಡೆಸಲು ಮಾಲ್ಡೀವ್ಸ್ ಗೆ ಉಡುಗೊರೆಯಾಗಿ ನೀಡಿದ ನಾಲ್ಕು ಬೇಹುಗಾರಿಕಾ ವಿಮಾನಗಳನ್ನು ನಿರ್ವಹಿಸಲು ಭದ್ರತಾ ಸಿಬ್ಬಂದಿಯ ಸಣ್ಣ ಘಟಕವನ್ನು ಭಾರತವು ಈ ದ್ವೀಪ ರಾಷ್ಟ್ರದಲ್ಲಿ ನಿಯೋಜಿಸಿದೆ