ವಾಷಿಂಗ್ಟನ್, ಜ 12(DaijiworldNews/AA): ಇರಾನ್ ಬೆಂಬಲಿತ ಹೌತಿ ಬಂಡುಕೋರರ ನೆಲೆಗಳ ಮೇಲೆ ಅಮೆರಿಕ ಮತ್ತು ಬ್ರಿಟನ್ ಸೇನೆಗಳು ಗುರುವಾರ ಯೆಮೆನ್ ನಲ್ಲಿ ವೈಮಾನಿಕ ದಾಳಿಯನ್ನು ನಡೆಸಿದೆ.
ಅಮೆರಿಕ ಹಾಗೂ ಬ್ರಿಟನ್ ಈ ಎರಡು ದೇಶಗಳ ಸೇನೆಗಳು ಹೌತಿ ಬಂಡುಕೋರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಿವೆ. ಈ ಭಯೋತ್ಪಾದಕ ಗುಂಪು ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಹಡಗು ಸಾರಿಗೆಯ ಮೇಲೆ ದಾಳಿ ನಡೆಸಿದೆ. ಆ ಬಳಿಕ ಉಭಯ ದೇಶಗಳ ಸೇನೆಗಳಿಂದ ದಾಳಿ ನಡೆದಿದೆ. ಮುಂಬರುವ ದಿನಗಳಲ್ಲಿ ಹಡಗು ಸಾರಿಗೆಯ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್ "ಕೆಂಪು ಸಮುದ್ರದಲ್ಲಿ ಅಂತರಾಷ್ಟ್ರೀಯ ಸರಕು ಹಡಗುಗಳ ಮೇಲೆ ದಾಳಿ ನಡೆಸಿರುವ ಹೌತಿ ಬಂಡುಕೋರರ ವಿರುದ್ಧ ದಾಳಿ ನಡೆಸಲು ಹಿಂಜರಿಯುವ ಪ್ರಶ್ನೆ ಇಲ್ಲ. ಬಂಡುಕೋರರಿಂದ ದಾಳಿ ಮುಂದುವರೆದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್ ರಕ್ಷಣಾ ಸಚಿವಾಲಯ, "ಅಮೇರಿಕ ಮತ್ತು ನಮ್ಮ ಪಾಲುದಾರರು ಸೇರಿದಂತೆ ನಮ್ಮ ಸಿಬ್ಬಂದಿಯ ಮೇಲಿನ ಬಂಡುಕೋರರ ಈ ಉದ್ದೇಶಿತ ದಾಳಿಯನ್ನು ಸಹಿಸುವುದಿಲ್ಲ. ಇದರೊಂದಿಗೆ ಸಮುದ್ರ ಸಾರಿಗೆಯ ವ್ಯವಸ್ಥೆಯನ್ನು ಹಾಳು ಮಾಡಲು ಬಿಡುವುದಿಲ್ಲ. ವ್ಯಾಪಾರಿ ಹಡಗುಗಳಿಗೆ ಬೆದರಿಕೆಯೊಡ್ಡುತ್ತಿದ್ದ ಹೌತಿ ಬಂಡುಕೋರರಿಗೆ ತಕ್ಕ ಉತ್ತರ ನೀಡಿದ್ದೇವೆ" ಎಂದು ಹೇಳಿದೆ.
ಉಭಯ ದೇಶಗಳ ಸೇನೆಗಳು ಹೌತಿ ಬಂಡುಕೋರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇನ್ನು ಈ ದಾಳಿಯ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಇರಾಕ್ ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯ ಸುದ್ದಿಯೂ ಬೆಳಕಿಗೆ ಬರುತ್ತಿದೆ.