ಅರಿಜೋನಾ, ಜ 15 (DaijiworldNews/AA): ಹಾಟ್ ಬಲೂನ್ ಪತನಗೊಂಡು ನಾಲ್ಕು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕಾದ ಅರಿಜೋನಾದ ಎಲೋಯ್ ಬಳಿ ಭಾನುವಾರ ನಡೆದಿದೆ.
ದುರಂತ ಸಂಭವಿಸಿದಾಗ ಹಾಟ್ ಬಲೂನ್ ನಲ್ಲಿ ಒಟ್ಟು 13 ಜನರಿದ್ದರು. ಈ ಪೈಕಿ 8 ಮಂದಿ ಸ್ಕೈಡೈವರ್ ಗಳು, 4 ಮಂದಿ ಪ್ರಯಾಣಿಕರು ಮತ್ತು ಓರ್ವ ಪೈಲಟ್ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
'ಫೀನಿಕ್ಸ್ ನಿಂದ ದಕ್ಷಿಣಕ್ಕೆ 97 ಕಿಮೀ ದೂರದಲ್ಲಿರುವ ಅರಿಜೋನಾ ರಾಜ್ಯದ ಗ್ರಾಮೀಣ ಮರುಭೂಮಿ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ಸ್ಕೈಡ್ರೈವರ್ ಗಳು ಯಾವುದೇ ತೊಂದರೆ ಇಲ್ಲದೆ ಟೇಕ್ ಆಫ್ ಆಗಿ ಯೋಜಿತ ಸ್ಕೈಡ್ರೈವಿಂಗ್ ಈವೆಂಟ್ ಅನ್ನು ಪೂರ್ಣಗೊಳಿಸಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಬಲೂನ್ ನಲ್ಲಿ ಕಾಣಿಸಿಕೊಂಡ ಅನಿರ್ದಿಷ್ಟ ಸಮಸ್ಯೆಯಿಂದಾಗಿ ಬಲೂನ್ ನೆಲಕ್ಕೆ ಅಪ್ಪಳಿಸಿದೆ. ಇನ್ನು ಸಂತ್ರಸ್ತರ ಹೆಸರನ್ನು ಅವರ ಸಂಬಂಧಿಕರಿಗೆ ತಿಳಿಸುವವರೆಗೆ ಬಂಹಿರಂಗ ಪಡಿಸಲಾಗುವುದಿಲ್ಲ' ಎಂದು ಎಲೋಯ್ ನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಹಾಟ್ ಬಲೂನ್ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಬಳಿಕ ಸಾವನ್ನಪ್ಪಿದ್ದಾರೆ. ಪ್ರಸ್ತುತ ಒಬ್ಬರು ಗಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತಂತೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ. ಹಾಟ್ ಬಲೂನ್ ಟೇಕ್ ಆಫ್ ಆದ ಸ್ಥಳದ ಬಗ್ಗೆ, ಬಲೂನ್ ಹಾರಾಟದ ಯೋಜನೆ ಬಗ್ಗೆ ಹಾಗೂ ಬಲೂನ್ ತಲುಪಬೇಕಿದ್ದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಇನ್ನು ತನಿಖಾಧಿಕಾರಿಗಳು ಸಾಕ್ಷಿಗಳಿಂದ ಮಾಹಿತಿಯನ್ನು ಪಡೆದು, ಘಟನೆಯ ವಿಡಿಯೋವನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.