ನ್ಯೂಯಾರ್ಕ್, ಜನವರಿ 19(DaijiworldNews/RA):ತಮ್ಮ ವೃತ್ತಿಯ ಕಾರಣದಿಂದಲೇ 2023 ರ ಅಂತ್ಯದ ವೇಳೆಗೆ ವಿಶ್ವದಾದ್ಯಂತ ಅಂದಾಜು 320 ಪತ್ರಕರ್ತರು ಜೈಲು ಪಾಲಾಗಿದ್ದಾರೆ ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿಯ (CPJ) ಇತ್ತೀಚಿನ ವರದಿಯು ಬಹಿರಂಗಪಡಿಸಿದೆ.
1992 ರಲ್ಲಿ ಸಮಿತಿಯು ತನ್ನ ವಾರ್ಷಿಕ ಜನಗಣತಿಯನ್ನು ಪ್ರಾರಂಭಿಸಿದ ನಂತರ ಇದು ಎರಡನೇ ಅತಿ ಹೆಚ್ಚು ಜೈಲಿನಲ್ಲಿರುವ ಪತ್ರಕರ್ತರ ಸಂಖ್ಯೆಯಾಗಿದೆ.ಈ ಬೆಳವಣಿಗೆಗಳು ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಸಮಿತಿ ಹೇಳಿದೆ.
ಸೆರೆವಾಸದಲ್ಲಿರುವ ಪತ್ರಕರ್ತರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಚೀನಾ, ಮ್ಯಾನ್ಮಾರ್ ಮತ್ತು ಬೆಲಾರಸ್ ಈ ಮೂರು ದೇಶದವರಾಗಿದ್ದಾರೆ.ನಮ್ಮ ಈ ಸಂಶೋಧನೆಯು ಜಾಗತಿಕವಾಗಿ ನಿರಂಕುಶಾಧಿಕಾರವು ಹೇಗೆ ಬೇರೂರಿದೆ ಎಂಬುದನ್ನು ತೋರಿಸುತ್ತದೆ ಎಂದು ಸಮಿತಿಯು ಬೇಸರ ವ್ಯಕ್ತಪಡಿಸಿದೆ.
CPJ ಹೇಳುವ ಪ್ರಕಾರ 17 ನಾನ್ಲೊಕಲ್ ಪತ್ರಕರ್ತರಲ್ಲಿ ಹನ್ನೆರಡು ಮಂದಿಯನ್ನು ರಷ್ಯಾದಲ್ಲಿ ಬಂಧಿಸಲಾಗಿದೆ.ಅವರಲ್ಲಿ ಇಬ್ಬರು US ನಾಗರಿಕರು ಸೇರಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ ಇವಾನ್ ಗೆರ್ಷ್ಕೋವಿಚ್ ಮತ್ತು ರೇಡಿಯೊ ಫ್ರೀ ಯುರೋಪ್/ರೇಡಿಯೊ ಲಿಬರ್ಟಿಯ ಅಲ್ಸು ಕುರ್ಮಶೆವಾ, ಇವರಿಬ್ಬರೂ ಪೂರ್ವಭಾವಿ ಬಂಧನದಲ್ಲಿದ್ದಾರೆ.ಇವರಲ್ಲಿ ಏಳು ಪತ್ರಕರ್ತರು ಭಾರತದವರು ಸೇರಿದ್ದಾರೆ ಎಂದು ಸಮಿತಿ ಮಾಹಿತಿ ನೀಡಿದೆ.