ಶ್ರೀಲಂಕಾ,ಏ 25(Daijiworld News/MSP): ಈಸ್ಟರ್ ಭಾನುವಾರದ ದಿನ ನಡೆದ ಸರಣಿ ಬಾಂಬ್ ದಾಳಿಗಳಲ್ಲಿ ಬುರ್ಖಾ ಧರಿಸಿದ್ದ ಮಹಿಳಾ ಬಾಂಬರ್ ಇರುವ ಬಗ್ಗೆ ಖಚಿತ ಮಾಹಿತಿ ದೊರಕುತ್ತಿದ್ದಂತೆಯೇ ಶ್ರೀಲಂಕಾ ಸರ್ಕಾರ ಬುರ್ಖಾ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿದೆ.
ಬುರ್ಖಾ ಧರಿಸಿದ ಮಹಿಳಾ ಬಾಂಬರ್ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ, ದ್ವೀಪ ರಾಷ್ಟ್ರದ ಕೆಲ ಸಂಸದರು ಬುರ್ಖಾ ನಿಷೇಧಗೊಳಿಸುವಂತೆ ಧ್ವನಿ ಎತ್ತಿದ್ದಾರೆ. ಯು ಎನ್ ಪಿ ಪಕ್ಷದ ನಾಯಕ ಅಶು ಮಾರಸಿಂಘೆ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ’ಬುರ್ಖಾ ಧರಿಸಿದ ಮಹಿಳೆ ಬಾಂಬ್ ದಾಳಿಯಲ್ಲಿ ನೇರ ಭಾಗಿಯಾಗಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ಬುರ್ಖಾ ಎನ್ನುವುದು ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ವಸ್ತ್ರ ಅಲ್ಲ, ದೇಶದ ಕೆಲ ಭಾಗದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರವೇಶಿಸುವಾಗ ಬುರ್ಖಾ ಕಡ್ಡಾಯವಾಗಿ ತೆಗೆಯಬೇಕೆಂಬ ಸೂಚನೆ ನೀಡಲಾಗಿತ್ತು ’ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ಬುರ್ಖಾ ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ವಸ್ತ್ರ ಅಲ್ಲವಾಗಿರುವ ಕಾರಣ ಮಸೀದಿಗಳ ಮೌಲ್ವಿಗಳ ಜೊತೆ ಚರ್ಚಿಸಿ ಬುರ್ಖಾ ನಿಷೇಧ ಜಾರಿಗೆ ತರುವ ನಿಟ್ಟಿನಿಂದ ಸಚಿವ ಸಂಪುಟದ ಹಲವು ಸದಸ್ಯರು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.
ಪ್ರಪಂಚದ ಹಲವು ಭಾಗಗಳಾದ ಫ್ರಾನ್ಸ್, ಬೆಲ್ಜಿಯಂ , ಆಸ್ಟ್ರೀಯಾ, ಚಾದ್, ಕ್ಯಾಮರೂನ್, ಗಬಾನ್, ಮೊರಾಕ್ಕೋ, ಬಲ್ಗೇರಿಯಾ, ಡೆನ್ಮಾರ್ಕ್, ಸೇರಿದಂತೆ ಹಲವು ದೇಶಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸುವುದಕ್ಕೆ ಅಲ್ಲಿನ ಸರ್ಕಾರ ಈಗಾಗಲೇ ನಿಷೇಧ ಹೇರಿದೆ.