ಸೌದಿ ಅರೇಬಿಯಾ, ಫೆ 12(DaijiworldNews/SK): ಈ ಬಾರಿಯ ವಿಶ್ವ ಮಾನ್ಯ 2024 ಪ್ರಶಸ್ತಿಯನ್ನು ಗಲ್ಫ್ ಸೌದಿಯ ಕ್ವಾಂಟ್ರಾಕ್ಟಿಂಗ್ ಕಂಪನಿ ಜುಬೈಲ್ ಅಲ್ ಮುಝೈನ್ ಸಂಸ್ಥೆಯ ಸಿಇಒ ಝಕರಿಯಾ ಬಜ್ಪೆ, ಎಕ್ಸ್ ಪರ್ಟೈಸ್ ಗ್ರೂಪ್ ಅಧ್ಯಕ್ಷ ಮತ್ತು ಹಲವಾರು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ ಶೇಖ್ ಕರ್ನಿರೆ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕ ಸತೀಶ್ ಕುಮಾರ್ ಅಂಚನ್ ಬಜಾಲ್ ಅವರಿಗೆ ನೀಡಿ ಗೌರವಿಸಲಾಯಿತು.
17ನೇ ವಿಶ್ವ ಕನ್ನಡ ಸಮ್ಮೇಳನವು ಫೆ.8ರಂದು ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ಸೌದಿ ಅರೇಬಿಯಾದಲ್ಲಿ ನೆರವೇರಿತು. ಈ ಸಮಾವೇಶದ ಯಶಸ್ಸಿಗಾಗಿ ಅಲ್ಮುಝೈನ್ ಸಂಸ್ಥೆಯ ಸಿಇಒ ಝಕರಿಯಾ ಬಜ್ಪೆ, ಎಕ್ಸ್ಪರ್ಟೈಸ್ ಕ್ವಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್ನ ನಿರ್ದೇಶಕ ಕೆಎ ಶೇಖ್ ಕರ್ನಿರೆ, ರಫೀಕ್ ಸೂರಿಂಜೆ ಹಾಗೂ ಹಲವಾರು ಕಾರ್ಯಕರ್ತರು ಶ್ರಮಿಸಿದ್ದಾರೆ.
ಇನ್ನು ವಿಶ್ವ ಮಾನ್ಯ 2024 ಪ್ರಶಸ್ತಿಗೆ ಭಾಜನರಾದ ಸತೀಶ್ ಅಂಚನ್ ಅವರು ಅಸಂಖ್ಯಾತ ಆರ್ಥಿಕ ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದವರು. ಚಂದ್ರಶೇಖರ ಕುಂದರ್ ಕೊಡಿಯಾಲ್ ಬೈಲ್ ಮತ್ತು ಶಾರದ ಅಂಚನ್ ದಂಪತಿಗಳ ಪುತ್ರನಾದ ಸತೀಶ್ ಅಂಚನ್ ಅವರು ಮೂಲತಃ ಪಕ್ಕಲಡ್ಕ ಬಜಾಲ್ ನ ಕಂಕನಾಡಿಯವರು. ಚಂದ್ರಶೇಖರ ಕುಂದರ್ ದಂಪತಿಗಳ ಮೂವರು ಗಂಡು ಮಕ್ಕಳಲ್ಲಿ ಸತೀಶ್ ಅಂಚನ್ ಕಿರಿಯಾವರಾಗಿದ್ದು ಕೇವಲ ಮೂರು ವರ್ಷದವರಾಗಿದ್ದಾಗ ತಮ್ಮ ತಾಯಿಯನ್ನು ಕಳೆದುಕೊಂಡರು. ನಂತರ ಸತೀಶ್ ಅವರು ಅಜ್ಜಿ ಮತ್ತು ಚಿಕ್ಕಪ್ಪ ರಾಘವ ಅಂಚನ್ ಅವರ ಆರೈಕೆಯಲ್ಲಿ ಬೆಳೆದರು.
ಸತೀಶ್ ಅಂಚನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಜಾಲ್ನ ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪೂರ್ಣಗೊಳಿಸಿ ಮಾಧ್ಯಮಿಕ ಶಿಕ್ಷಣವನ್ನು ರೊಸಾರಿಯೊ ಹೈಸ್ಕೂಲ್ ನಲ್ಲಿ ಮಾಡಿದರು. ಬಳಿಕ ಪಿಯುಸಿ ಶಿಕ್ಷಣವನ್ನು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮತ್ತು ಪದವಿಯನ್ನು ಸೈಂಟ್ ಅಲೋಶಿಯಸ್ ಈವಿನಿಂಗ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.