ಲಂಡನ್, ಏ 26 (Daijiworld News/MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ಮತ್ತೆ ಲಂಡನ್ ಕೋರ್ಟ್ ಜಾಮೀನು ನಿರಾಕರಿಸಿದ್ದು. ಹೀಗಾಗಿ ದೇಶಭ್ರಷ್ಟ ನೀರವ್ ಮತ್ತೆ ಲಂಡನ್ ಜೈಲಿನಲ್ಲಿಯೇ ಕಾಲಕಳೆಯುವಂತಾಗಿದೆ.
ಲಂಡನ್ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರವ್ ಮೋದಿ ಅವರು ಜಾಮೀನಿನಾಗಿ ಮೂರನೇ ಬಾರಿ ಅರ್ಜಿ ಹಾಕಿದ್ದರು. ಆದರೆ ಏ.26 ರ ಶುಕ್ರವಾರದಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಮೂರನೇ ಬಾರಿಯೂ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ದೇಶದ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿರುವ , ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,000 ಕೋಟಿ ರೂ ವಂಚಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ದೇಶಬಿಟ್ಟು ಪರಾರಿಯಾಗಿದ್ದರು.
ಕಳೆದ ಬಾರಿ ವಿಚಾರಣೆ ಸಂದರ್ಭ , ನೀರವ್ ಮೋದಿಗೆ ಜಾಮೀನು ನೀಡಿದರೆ, ಆತ ಮತ್ತೆ ದೇಶಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎಂದು ವಕೀಲರು ನ್ಯಾಯಾಧೀಶರ ಮುಂದೆ ವಾದ ಮಂಡನೆ ಮಾಡಿದ್ದರು .ಮಾತ್ರವಲ್ಲದೆ ನೀರವ್ ಮೋದಿಯು ವನುತುವ ಎಂಬ ದ್ವೀಪ ದೇಶದ ಪೌರತ್ವ ಪಡೆಯಲು ಪ್ರಯತ್ನಿಸಿದ್ದಾರೆ ಎಂಬ ದಾಖಲೆಗಳನ್ನು ನ್ಯಾಯಾಲಯ ನೀಡಿದ್ದರು. ಈ ಹಿನ್ನಲೆಯಲ್ಲಿ ಅವರಿಗೆ ಜಾಮೀನು ನಿರಾಕರಿಸಿ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 26ಕ್ಕೆ ಮುಂದೂಡಲಾಗಿತ್ತು.
ಆದರೆ ಇದೀಗ ಮೂರನೇ ಬಾರಿಯೂ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು ಪ್ರಕರಣದ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಲಾಗಿದೆ. ಹೀಗಾಗಿ ನೀರವ್ ಮೋದಿಗೆ ಮತ್ತೆ ವ್ಯಾಂಡ್ಸ್ವರ್ತ್ ಜೈಲೇ ಗತಿಯಾಗಿದೆ.