ಅಬುಧಾಬಿ, ಫೆ 13 (DaijiworldNews/AA): "ನಿಮ್ಮ ಬೆಂಬಲವಿಲ್ಲದೆ ಇಲ್ಲಿ ಬಿಎಪಿಎಸ್ (ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ) ದೇವಾಲಯದ ನಿರ್ಮಾಣವು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಯುಎಇ ಅಧ್ಯಕ್ಷರಿಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಗೆ ತೆರಳಿದ್ದರು. ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷರಿಗೆ ಸ್ವಾಗತಕ್ಕಾಗಿ ಧನ್ಯವಾದ ತಿಳಿಸಿದರು. ಬಳಿಕ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಅವರು, "ನಿಮ್ಮನ್ನು ಭೇಟಿಯಾಗಲು ನಾನು ಇಲ್ಲಿಗೆ ಬಂದಾಗ ನನ್ನ ಕುಟುಂಬವನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಅನಿಸುತ್ತದೆ. ಕಳೆದ 7 ತಿಂಗಳಲ್ಲಿ ನಾವು 5 ಬಾರಿ ಭೇಟಿಯಾಗಿದ್ದೇವೆ. ಈ ಭೇಟಿಯು ಅಪರೂಪ, ನಮ್ಮ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದರು."
"ನನ್ನ ಆಹ್ವಾನವನ್ನು ಸ್ವೀಕರಿಸಿ ವೈಬ್ರಂಟ್ ಗುಜರಾತ್ ಶೃಂಗಸಭೆಗಾಗಿ ಗುಜರಾತ್ ಗೆ ಬಂದಿದ್ದಕ್ಕಾಗಿ ನಿಮಗೆ ಧನ್ಯವಾದ. ಈ ಕಾರ್ಯಕ್ರಮವನ್ನು ನೀವು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ ಜೊತೆಗೆ ಪ್ರಪಂಚದಲ್ಲಿ ಅದರ ಖ್ಯಾತಿಯನ್ನು ಹೆಚ್ಚಿಸಿದ್ದೀರಿ" ಎಂದು ಅವರು ಹೇಳಿದರು.
ಇನ್ನು ಈ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಬಹು ಒಪ್ಪಂದಗಳ ವಿನಿಮಯ ಮಾಡಿಕೊಂಡರು. ಹಾಗೂ ಅವರೊಂದಿಗೆ ಯುಪಿಐ ರುಪೇ ಕಾರ್ಡ್ ಸೇವೆಯನ್ನು ಪ್ರಾರಂಭಿಸಿದರು.