ಕಠ್ಮಂಡು, ಫೆ 16 (DaijiworldNews/AA): ಅಮೆರಿಕಕ್ಕೆ ತೆರಳಲು ಸಹಕಾರ ನೀಡುವುದಾಗಿ ಭರವಸೆ ನೀಡಿ ಕಳೆದ 2 ವಾರಗಳಿಂದ ಭಾರತದ 11 ಮಂದಿಯನ್ನು ನೇಪಾಳದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಇದೀಗ ಈ ಮಾನವ ಕಳ್ಳಸಾಗಾಣೆ ಜಾಲವನ್ನು ಭೇದಿಸಿ, ಇದರಲ್ಲಿ ಶಾಮೀಲಾಗಿದ್ದ ಒಬ್ಬ ನೇಪಾಳಿ ಹಾಗೂ 8 ಮಂದಿ ಭಾರತೀಯರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.
ಈ ಮಾನವ ಕಳ್ಳಸಾಗಾಣೆಯ ಪ್ರಕರಣವು ಇತ್ತೀಚೆಗಷ್ಟೇ ಬಿಡುಗಡೆಯಾದ ನಟ ಶಾರುಖ್ ಖಾನ್ ನಟನೆಯ 'ಡಂಕಿ' ಚಿತ್ರದ ಕತೆಯನ್ನೇ ಹೋಲುತ್ತದೆ. ಆದ ಕಾರಣ ಈ ಕಾರ್ಯಾಚರಣೆಯನ್ನು 'ಆಪರೇಷನ್ ಡಂಕಿ' ಎಂದು ನೇಪಾಳ ಪೊಲೀಸರು ನಾಮಕರಣ ಮಾಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪಿಗಳು ಭಾರತದ ಪಂಜಾಬ್ ಹಾಗೂ ಹರಿಯಾಣ ಮೂಲದವರು ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ರಕ್ಷಿಸಲ್ಪಟ್ಟವರೆಲ್ಲರೂ ವಿದ್ಯಾರ್ಥಿಗಳು ಎನ್ನಲಾಗಿದೆ. ಆರೋಪಿಗಳು ಸಂಸ್ರಸ್ತರನ್ನು ಮೆಕ್ಸಿಕೊ ಮಾರ್ಗವಾಗಿ ಅಮೆರಿಕಕ್ಕೆ ಕಳುಹಿಸಿಕೊಡುವುದಾಗಿ ಅವರನ್ನೆಲ್ಲಾ ಕಠ್ಮಂಡು ಹೊರವಲಯದ ಬಾಡಿಗೆ ಮನೆಯೊಂದರಲ್ಲಿ 2 ವಾರಗಳಿಂದ ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಠ್ಮಂಡು ಎಸ್ ಎಸ್ ಪಿ ಭೂಪೇಂದ್ರ ಬಹದೂರ್ ಖತ್ರಿ ಅವರು ಅಮೆರಿಕಕ್ಕೆ ತೆರಳಲು ನೆರವು ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ 45 ಲಕ್ಷ ರೂ. ಹಾಗೂ ಕಠ್ಮಂಡುವಿಗೆ ಬಂದ ಬಳಿಕ ವಿಸಾ ಶುಲ್ಕವೆಂದು ಹೆಚ್ಚುವರಿ 2.5 ಲಕ್ಷ ರೂ ಹಣವನ್ನು ಮಧ್ಯವರ್ತಿಗಳು ಸಂತ್ರಸ್ತರಿಂದ ವಸೂಲಿ ಮಾಡಿದ್ದಾರೆ. ಆರೋಪಿಗಳಿಗೆ ನೆರವು ನೀಡಿದ ನೇಪಾಳಿ ಪ್ರಜೆಯನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಅಪಹರಣ, ಮಾನವ ಕಳ್ಳಸಾಗಣೆ ಹಾಗೂ ಇತರ ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಸಂತ್ರಸ್ತರನ್ನು ಭಾರತೀಯ ರಾಯಭಾರ ಕ್ಚೇರಿ, ವಿದೇಶಾಂಗ ಸಚಿವಾಲಯ ಮತ್ತು ಸಂಬಂಧಿತ ಇತರ ಅಧಿಕಾರಿಗಳ ಮೂಲಕ ಭಾರತಕ್ಕೆ ಕಳುಹಿಸಲಾಗುವುದು ಎಂದರು.