ಕೊಲಂಬೊ, ಎ27(Daijiworld News/SS): ಉಗ್ರರ ಅಡಗುತಾಣದ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಆತ್ಮಾಹುತಿ ಬಾಂಬರ್ಗಳು ತಮ್ಮನ್ನು ಸ್ಫೋಟಿಸಿಕೊಂಡಿದ್ದು, ಸ್ಫೋಟದಲ್ಲಿ ಒಟ್ಟು 15 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದಿರುವ ಉಗ್ರರ ಅಡಗುತಾಣದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಶ್ರೀಲಂಕಾ ಪೂರ್ವ ಪ್ರಾಂತ್ಯದ ಕಲಮುನೈನ ಸೈನಥಮರುತುವಿನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಅಡಗುತಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಆತ್ಮಾಹುತಿ ಬಾಂಬ್ ದಾಳಿಕೋರರು ಬಾಂಬ್ ಸ್ಫೋಟಿಸಿದ್ದಾರೆ.
ಈ ವೇಳೆ 6 ಮಕ್ಕಳು, 3 ಮಹಿಳೆಯರು ಸೇರಿ 15 ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ ನಾಲ್ವರು ಉಗ್ರರೂ ಸೇರಿದ್ದಾರೆ. ಮೂವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಅಪಾರ ಪ್ರಮಾಣ ರಾಸಾಯನಿಕ ಮತ್ತು ಸ್ಫೋಟಕಗಳು 1 ಲಕ್ಷ ಬಾಲ್ ಬೇರಿಂಗ್ಗಳು ಹಾಗೂ 150 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.