ಕೊಲಂಬೋ, ಏ 27 (Daijiworld News/MSP): ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಳ್ಳುವ ಮೊದಲೇ ಶ್ರೀಲಂಕಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮುಂದುವರಿದಿದ್ದು, ಶನಿವಾರ ಇಬ್ಬರು ಶಂಕಿತ ಉಗ್ರರನ್ನು ಶ್ರೀಲಂಕಾ ಸೇನಾಪಡೆಗಳು ಹೊಡೆದುರುಳಿಸಿವೆ.
ಶ್ರೀಲಂಕಾದಲ್ಲಿ ರಕ್ಕಸರ ದಾಳಿಯಿಂದ ಕೊನೆಯೇ ಇಲ್ಲದಂತಾಗಿದ್ದು, ಕಲ್ಮುನಾಯ್ ಪ್ರಾಂತ್ಯದಲ್ಲಿ ಸೇನಾ ಪಡೆಗಳು ಪತ್ತೆಕಾರ್ಯದಲ್ಲಿ ತೊಡಗಿದ್ದಾಗ ಶಂಕಿತ ಉಗ್ರರು ಭದ್ರತಾಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸೈನಿಕರೂ ಕೂಡ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ. ಆದ್ರೆ ಗುಂಡಿನ ಚಕಮಕಿ ವೇಳೆ ಒಬ್ಬ ನಾಗರೀಕ ಮೃತಪಟ್ಟಿದ್ದಾನೆಎಂದು ತಿಳಿದುಬಂದಿದೆ.
ಇನ್ನೊಂದೆಡೆ ಸರಣಿ ಬಾಂಬ್ ದಾಳಿಗೆ ಮಾಸ್ಟರ್ ಪ್ಲಾನ್ ರೂಪಿಸಿ 250ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಶಂಕಿತ ಉಗ್ರರ ರೇಖಾಚಿತ್ರವನ್ನ ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ.
ಶಂಕಿತ ಉಗ್ರರಲ್ಲಿ ಮೂವರು ಮಹಿಳೆಯರು ಸೇರಿ ಓರ್ವ ಪುರುಷನ ರೇಖಾ ಚಿತ್ರ ಹಾಗೂ ಹೆಸರನ್ನ ಬಹಿರಂಗಪಡಿಸಿ ಶೋಧಕಾರ್ಯಾಚರಣೆ ನಡೆಸುತ್ತಿದೆ. ಇದಲ್ಲದೆ ಉಗ್ರರು ಸಮುದ್ರಮಾರ್ಗವಾಗಿ ಪಲಾಯನ ಮಾಡುವ ಸಾಧ್ಯತೆ ಇರೋದ್ರಿಂದ ಹಿಂದೂ ಮಹಾಸಾಗರದುದ್ದಕ್ಕೂ ಸುಮಾರು 10 ಸಾವಿರ ಸೈನಿಕರನ್ನು ನಿಯೋಜಿಸಲಾಗಿದ್ದು, ಲಂಕಾದಲ್ಲಿ ಅವಿತಿರುವ ಉಗ್ರರು ಯಾವುದೇ ಕಾರಣಕ್ಕೂ ಪರಾರಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಈಸ್ಟರ್ ಭಾನುವಾರದಂದು 9 ಆತ್ಮಾಹುತಿ ದಾಳಿಕೋರರು ಮೂರು ಚರ್ಚ್, ಮೂರು ಹೋಟೆಲ್ಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಪೊಲೀಸರು ಈವರೆಗೆ 76 ಶಂಕಿತರನ್ನ ವಶಕ್ಕೆ ಪಡೆದಿದ್ದು, ಬಂಧಿತರಲ್ಲಿ ಹಲವರು ಎನ್ಟಿಜೆ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿಸಿದೆ.