ಮಾಸ್ಕೋ, ಫೆ 19(DaijiworldNews/AA): ಎರಡು ದಿನಗಳ ಹಿಂದೆ ಜೈಲಿನಲ್ಲಿ ಮೃತಪಟ್ಟಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲೆಂದು ಸುಮಾರು 400 ಮಂದಿ ಬೀದಿಗಿಳಿದಿದ್ದಾರೆ. ಈ ವೇಳೆ ಬೀದಿಗಿಳಿದ ಅಷ್ಟೂ ಮಂದಿಯನ್ನು ರಷ್ಯಾದ ಪೊಲೀಸರು ಬಂಧಿಸಿದ್ದಾರೆ.
ರಷ್ಯಾದ ವಿವಿಧ ನಗರಗಳಲ್ಲಿ ನವಲ್ನಿ ಅವರಿಗೆ ಗೌರವ ಸಲ್ಲಿಸಲೆಂದು ಜನರು ಬೀದಿಗಿಳಿದಿದ್ದಾರೆ. ಇದರೊಂದಿಗೆ ಜನರು ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಪುಟಿನ್ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಜೊತೆಗೆ ಪುಟಿನ್ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ.
ಇನ್ನು ರಸ್ತೆಯಲ್ಲಿ ಪ್ರತಿಭಟನಾಕಾರರ ಗುಂಪು ಹೆಚ್ಚುತ್ತಿದ್ದಂತೆ ರಷ್ಯಾ ಪೊಲೀಸರು ಜನರನ್ನು ಬಂಧಿಸಲು ಪ್ರಾರಂಭಿಸಿದ್ದಾರೆ. ಸುಮಾರು 12 ಕ್ಕೂ ಹೆಚ್ಚು ನಗರಗಳಲ್ಲಿ ಪೊಲೀಸರು ಶನಿವಾರ ರಾತ್ರಿಯವರೆಗೆ 401 ಮಂದಿಯನ್ನು ಬಂಧಿಸಿದ್ದಾರೆ. ಇನ್ನು ರಷ್ಯಾದ ಅತಿ ದೊಡ್ಡ ನಗರ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ 200 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.