ಉಕ್ರೇನ್, ಫೆ 22 (DajiworldNews/AA): ಯುದ್ಧ ಪೀಡಿತ ಉಕ್ರೇನ್ ಗಡಿಯಲ್ಲಿ ಕಲಬುರಗಿಯ ಮೂವರು ಯುವಕರು ಸಿಲುಕಿದ್ದಾರೆ. ನಮ್ಮನ್ನು ನಕಲಿ ಸೇನಾ ಉದ್ಯೋಗ ದಂಧೆಯಿಂದ ಕೂಡಲೇ ರಕ್ಷಣೆ ಮಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ತೆಲಂಗಾಣದ 22 ವರ್ಷದ ಯುವಕ ಮತ್ತು ಕಲಬುರಗಿಯ ಮೂವರು ಯುವಕರು ವ್ಯಾಗ್ನರ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಯುವಕರು ರಷ್ಯಾ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ತೆಲಂಗಾಣದ ಯುವಕ ಮೊಹಮ್ಮದ್ ಸುಫಿಯಾನ್ ತನ್ನ ಕುಟುಂಬಕ್ಕೆ ಕಳುಹಿಸಿದ ವಿಡಿಯೋದಲ್ಲಿ ತಮ್ಮನ್ನು ರಕ್ಷಿಸಿ ಎಂದು ಮೊರೆ ಇಟ್ಟಿದ್ದಾರೆ.
ಈ ವಿಡಿಯೋದಲ್ಲಿ ಯುವಕರು ನಾವು ಹೈಟೆಕ್ ವಂಚನೆಗೆ ಒಳಗಾಗಿದ್ದೇವೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್ ನೊಂದಿಗೆ ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ಒತ್ತಾಯ ಮಾಡಲಾಗುತ್ತಿದೆ. ನಾವು 2023ರ ಡಿಸೆಂಬರ್ ನಲ್ಲಿ ಸೈನ್ಯದ ಭದ್ರತಾ ಸಹಾಯಕ ಕೆಲಸದ ಭರವಸೆ ಮೇರೆಗೆ ರಷ್ಯಾಗೆ ಬಂದಿರುತ್ತೇವೆ. ಇಲ್ಲಿಗೆ ಬಂದ ಬಳಿಕ ನಾವು ವಂಚನೆಗೆ ಒಳಗಾಗಿರುವ ಬಗ್ಗೆ ವಿಷಯ ತಿಳಿಯಿತು ಎಂದಿದ್ದಾರೆ.
ಇನ್ನು ಯುವಕರು ಈ ಹಿಂದೆ ದುಬೈನಲ್ಲಿ 30-40 ಸಾವಿರ ರೂ. ಸಂಬಳ ದೊರೆಯುವ ಉದ್ಯೋಗ ಮಾಡುತ್ತಿದ್ದರು. ಈ ಸಂದರ್ಭ ಓರ್ವ ಮಧ್ಯವರ್ತಿಯ ಪರಿಚಯವಾಗಿದ್ದು, ಆತ ರಷ್ಯಾದಲ್ಲಿ 2 ಲಕ್ಷ ರೂ. ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಆ ವ್ಯಕ್ತಿಯ ಮಾತಿಗೆ ಮರುಳಾಗಿ ಈ ಯುವಕರು ಡಿಸೆಂಬರ್ನಲ್ಲಿ ರಷ್ಯಾಗೆ ಕೆಲಸಕ್ಕೆಂದು ತೆರಳಿರುತ್ತಾರೆ.