ಜೆರುಸಲೇಂ, ಫೆ 23(DaijiworldNews/AA): ದಕ್ಷಿಣ ಮತ್ತು ಮಧ್ಯ ಗಾಜಾದಲ್ಲಿ ಇಸ್ರೇಲಿ ಪಡೆಗಳು ದಾಳಿ ನಡೆಸಿವೆ. ಈ ದಾಳಿಯಲ್ಲಿ 71 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಆಕ್ರಮಿಸಿರುವ ವೆಸ್ಟ್ ಬ್ಯಾಂಕ್ ನಲ್ಲೂ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿದೆ. ಇಲ್ಲಿನ ಚೆಕ್ ಪಾಯಿಂಟ್ ಸಮೀಪದ ರಸ್ತೆಯೊಂದರಲ್ಲಿ ಫೆ. 22 ರಂದು ಮೂವರು ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಇಸ್ರೇಲ್ ಪ್ರಜೆ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಇನ್ನು ದಾಳಿ ಮಾಡಿದ ಮೂವರಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಹಾಗೂ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವ ಬೆನ್ನಲ್ಲೇ ಯುರೋಪಿನ ರಾಜತಾಂತ್ರಿಕರು ಕದನ ವಿರಾಮಕ್ಕೆ ಒತ್ತಡ ಹೇರುತ್ತಿದ್ದಾರೆ. ಇದರ ಬೆನ್ನಲ್ಲೇ 'ನಮ್ಮ ಒತ್ತೆಯಾಳುಗಳ ಸಮಾಲೋಚಕರಿಗೆ ನೀಡಿರುವ ಅಧಿಕಾರವನ್ನು ನಾವು ಮತ್ತಷ್ಟು ವಿಸ್ತರಣೆ ಮಾಡುತ್ತೇವೆ' ಎಂದು ಇಸ್ರೇಲ್ ನ ರಕ್ಷಣಾ ಸಚಿವರು ಹೇಳಿದ್ದಾರೆ.