ವಾಷಿಂಗ್ಟನ್, ಫೆ 24(DaijiworldNews/AA): ಅಮೇರಿಕಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಕಾರು ಡಿಕ್ಕಿಯಾಗಿ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಮೃತಪಟ್ಟಿದ್ದರು. ಇದೀಗ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುವುದಾಗಿ ಭಾರತೀಯ ರಾಯಭಾರಿ ಕಚೇರಿ ಭರವಸೆ ನೀಡಿದೆ.
2023 ರ ಜನವರಿಯಲ್ಲಿ ಆಂಧ್ರಪ್ರದೇಶ ಮೂಲದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ(23) ಅವರು ಸಿಯಾಟಲ್ ಪೊಲೀಸ್ ಅಧಿಕಾರಿಯ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದರು. ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಪೊಲೀಸ್ ಅಧಿಕಾರಿಯ ವಿರುದ್ಧ ದಾಖಲು ಮಾಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಇತ್ತೀಚೆಗಷ್ಟೇ ಅಮೇರಿಕಾ ನ್ಯಾಯಾಲಯ ವಜಾಗೊಳಿಸಿದೆ.
ಪೊಲೀಸ್ ಅಧಿಕಾರಿಯ ಕಾರು ಜಾಹ್ನವಿ ಅವರಿಗೆ ಡಿಕ್ಕಿ ಹೊಡೆಯುವ ಸಂದರ್ಭ ಸುಮಾರು 120 ಕಿ.ಮೀ ವೇಗದಲ್ಲಿ ಸಂಚರಿಸುತ್ತಿತ್ತು. ಜಾಹ್ನವಿ ಅವರು ಡಿಕ್ಕಿಯ ರಭಸಕ್ಕೆ ಸುಮಾರು ನೂರು ಅಡಿ ದೂರ ಹೋಗಿ ಬಿದ್ದಿದ್ದರು. ಜೊತೆಗೆ ಅಪಘಾತ ಸಂಭವಿಸಿದ ವೇಳೆ ಪೊಲೀಸ್ ಅಧಿಕಾರಿಯ ಸಹೋದ್ಯೋಗಿ ಕಾರಿನಲ್ಲಿ ನಗುತ್ತಿದ್ದರು. ಇದು ಬಾಡಿಕ್ಯಾಮ್ ಫೂಟೇಜ್ನಿಂದ ತಿಳಿದುಬಂದಿತ್ತು ಎನ್ನಲಾಗಿದೆ.
ಇನ್ನು ಮೃತ ವಿದ್ಯಾರ್ಥಿನಿ ಜಾಹ್ನವಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಸಂಪೂರ್ಣ ಮಾಡುವವರೆಗೆ ಕಾಯಲಾಗುತ್ತದೆ ಎಂದು ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.