ಕೊಲಂಬೋ, ಎ28(Daijiworld News/SS): ಕೆಟ್ಟ ವ್ಯಕ್ತಿಗಳೊಂದಿಗೆ ನನ್ನ ಸಹೋದರ ಸೇರಿದ್ದ. ಆತ ನನ್ನ ಸಹೋದರನಲ್ಲ, ತಪ್ಪು ವ್ಯಕ್ತಿಗಳಿಂದ ಧಾರ್ಮಿಕತೆ ಕಲಿತ, ಆತ ಸತ್ತಿದ್ದು ಒಳ್ಳೆಯದೇ ಆಯಿತು ಎಂದು ಶ್ರೀಲಂಕಾ ಮೇಲೆ ದಾಳಿ ನಡೆಸಿದ ದಾಳಿಕೋರ ಉಗ್ರನ ಸಹೋದರಿ ಹೇಳಿದ್ದಾರೆ.
ಎ.27 ರಂದು ಶ್ರೀಲಂಕಾದ ಕಾಲ್ ಮುನೈ ಪಟ್ಟಣದಲ್ಲಿ ಇಸಿಸ್ ಉಗ್ರರ ಅಡಗುದಾಣದ ಮೇಲೆ ಶ್ರೀಲಂಕಾದ ಸೇನೆ ದಾಳಿ ನಡೆಸಿತ್ತು. ಈ ವೇಳೆ ಮೂವರು ಉಗ್ರರು ಹತರಾಗಿದ್ದರು. ಇದೇ ಕಾಲ್ ಮುನೈ ಪಟ್ಟಣದಲ್ಲಿದ್ದ ಉಗ್ರ ಝಹ್ರಾನ್ ಹಶೀಂನ ಮನೆ ಮೇಲೆ ಶ್ರೀಲಂಕಾ ಸೇನೆ ದಾಳಿ ನಡೆಸಿದ್ದು, ಈ ವೇಳೆ ಉಗ್ರನ ಕುಟುಂಬಸ್ಥರು ಸೇನಾಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಿದ್ದಾರೆ.
ಸೇನಾಧಿಕಾರಿಗಳೊಂದಿಗೆ ಮಾತನಾಡಿದ ಉಗ್ರನ ಸಹೋದರಿ ಮದಾನಿಯಾ, ನನ್ನ ಸಹೋದರ ತಪ್ಪು ವ್ಯಕ್ತಿಗಳೊಂದಿಗೆ ಸೇರಿ ಧಾರ್ಮಿಕತೆ ಕಲಿತ. ಕೆಟ್ಟ ವ್ಯಕ್ತಿಗಳ ಜೊತೆ ಇದ್ದ. ಆತ ಸತ್ತಿದ್ದು ಒಳ್ಳೆಯದೇ ಆಯಿತು. ಅವರ ಮೃತದೇಹಗಳನ್ನು ನಾನು ನೋಡಲಾರೆ. ಅವರು ಉಗ್ರರು ಎಂದು ಹೇಳಿದ್ದಾರೆ.
ವಾರದ ಹಿಂದೆ ಕೊಲಂಬೋದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 9 ಮಂದಿ ಇಸ್ಲಾಮಿಕ್ ಸ್ಟೇಟ್ ಆತ್ಮಹತ್ಯಾ ದಾಳಿಕೋರರು 3 ಚರ್ಚ್ ಹಾಗೂ 3 ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 253 ಮಂದಿ ಸಾವನ್ನಪ್ಪಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಶಾಂಘ್ರಿಲಾ ಹೋಟೆಲಿನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಉಗ್ರ ಝಹ್ರಾನ್ ಹಶೀಂ ಸುಮಾರು 100ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದನು.