ವಾಷಿಂಗ್ಟನ್, ಫೆ 29(DaijiworldNews/AA): ಯುಎಸ್ ಅಧ್ಯಕ್ಷ ಜೋ ಬಿಡೆನ್ ಯಾವುದೇ ಆರೋಗ್ಯ ಚಿಂತೆಗಳಿಲ್ಲದೆ "ಕರ್ತವ್ಯಕ್ಕೆ ಫಿಟ್" ಆಗಿದ್ದಾರೆ ಎಂದು ಅವರ ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ.
ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರವು ಜೋ ಬಿಡೆನ್ ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದು, ಅವರ ಪ್ರಸ್ತುತ ಆರೋಗ್ಯ ತಪಾಸಣಾ ಸಾರಾಂಶವನ್ನು ಶ್ವೇತಭವನ ಹಂಚಿಕೊಂಡಿದೆ. ಅಮೆರಿಕದಲ್ಲಿ ನವೆಂಬರ್ ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಗೂ ಮುನ್ನ ಜೋ ಬಿಡೆನ್ ಅವರ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಜೋ ಬಿಡೆನ್ ಅವರಿಗೆ ವೈದ್ಯಕೀಯ ಕೇಂದ್ರದಲ್ಲಿ ಆಪ್ಟೋಮೆಟ್ರಿ, ಡೆಂಟಿಸ್ಟ್ರಿ, ಆರ್ಥೋಪೆಡಿಕ್ಸ್, ಮೂಳೆಚಿಕಿತ್ಸೆ, ಫಿಸಿಕಲ್ ಥೆರಪಿ, ನ್ಯೂರಾಲಜಿ, ಸ್ಲೀಪ್ ಮೆಡಿಸಿನ್, ಕಾರ್ಡಿಯಾಲಜಿ, ರೇಡಿಯಾಲಜಿ ಮತ್ತು ಡರ್ಮಟಾಲಜಿಯಂತಹ ತಪಾಸಣೆಯನ್ನು ನಡೆಸಲಾಗಿದೆ. ಈ ಎಲ್ಲಾ ಚಿಕಿತ್ಸೆಗಳನ್ನು ಮುಗಿಸಿ ಹಿಂತಿರುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಡೆನ್ ಅವರು, ನಾನು ಇನ್ನೂ ಚಿಕ್ಕವನಂತೆ ಕಾಣಿಸುತ್ತೇನೆ ಎಂದು ವೈದ್ಯರು ಹೇಳಿದ್ದಾರೆ. ಹಿಂದಿನ ವರ್ಷಕ್ಕಿಂತ ಹೆಚ್ಚು ವ್ಯತ್ಯಾಸವೇನು ಇಲ್ಲ. ಎಲ್ಲಾ ಅದ್ಭುತವಾಗಿದೆ. ನನ್ನ ಜ್ಞಾಪಕ ಶಕ್ತಿ ಉತ್ತಮವಾಗಿದೆ ಎಂದು ತಿಳಿಸಿದರು.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಅವರು, "ಬಿಡೆನ್ ಅವರಿಗೆ ಅರಿವಿನ ಪರೀಕ್ಷೆಯ ಅಗತ್ಯವಿಲ್ಲ. ಇದು ನನ್ನ ನಿರ್ಧಾರವಲ್ಲ. ಇದು ಬಿಡೆನ್ ಅವರ ವೈದರ ನಿರ್ಧಾರವಾಗಿದೆ. ಜೊತೆಗೆ ನರವಿಜ್ಞಾನಿಗಳ ನಿರ್ಧಾರವೂ ಆಗಿದೆ" ಎಂದು ಹೇಳಿದರು.