ಪಾಕಿಸ್ತಾನ, ಮಾ 04(DaijiworldNews/AA): ಭಾರೀ ಮಳೆಗೆ ಹಲವು ಮನೆಗಳು ಕುಸಿದು ಬಿದ್ದು, ಕನಿಷ್ಠ 37 ಜನ ಸಾವನ್ನಪ್ಪಿದ ದುರ್ಘಟನೆ ಪಾಕಿಸ್ತಾನದಲ್ಲಿ ಸಂಭವಿಸಿದೆ.
ಕಳೆದ 48 ಗಂಟೆಗಳಲ್ಲಿ ಪಾಕ್ ನಲ್ಲಿ ಭಾರೀ ಮಳೆಯಿಂದಾಗಿ ಈ ಸಾವುಗಳು ಸಂಭವಿಸಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದಾಗಿ ಹಲವಾರು ಮನೆಗಳು ಧರೆಗುರುಳಿದೆ. ಹಾಗೂ ಭೂಕುಸಿತದಿಂದಾಗಿ ರಸ್ತೆಗಳು ಬಂದ್ ಆಗಿವೆ. ಇನ್ನು ಪಾಕ್ ನಲ್ಲಿ ಭಾರೀ ಹಿಮಪಾತವಾದ ಸಮಯದಲ್ಲೇ ಈ ಅವಘಡ ನಡೆದಿದೆ.
ಗುರುವಾರ ರಾತ್ರಿಯಿಂದ, ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಈ ಮಳೆಗೆ ಸುಮಾರು 23 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕರಾವಳಿ ನಗರವಾದ ಗ್ವಾದರ್ನಲ್ಲಿ ಪ್ರವಾಹ ಉಂಟಾಗಿದ್ದು, ಈ ಪ್ರವಾಹಕ್ಕೆ 5 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಇಷ್ಟೇ ಅಲ್ಲದೇ ಕಳೆದ 48 ಗಂಟೆಗಳಲ್ಲಿ ಬಜಾರ್, ಸ್ವಾತ್, ಲೋವರ್ ದಿರ್, ಮಲಕಂಡ್, ಖೈಬರ್, ಪೇಶಾವರ, ಉತ್ತರ, ದಕ್ಷಿಣ ವಜೀರಿಸ್ತಾನ್ ಮತ್ತು ಲಕ್ಕಿ ಮಾರ್ವತ್ ಸೇರಿದಂತೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಈ ಮಳೆಗೆ 37 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.