ವಾಷಿಂಗ್ಟನ್, ಮಾ 07 (DaijiworldNews/AA): ಅಮೇರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಉಭಯ ಪಕ್ಷದ ಅಭ್ಯರ್ಥಿಗಳಿಗೂ ಹಣ ದೇಣಿಗೆ ನೀಡುವ ಯೋಚನೆ ಹೊಂದಿಲ್ಲ ಎಂದು ಟೆಸ್ಲಾ ಸಿಇಓ ಎಲಾನ್ ಮಸ್ಕ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 'ಸ್ಪಷ್ಟವಾಗಿ ಹೇಳಬೇಕೆಂದರೆ... ನಾನು ಯಾವ ಅಧ್ಯಕ್ಷೀಯ ಅಭ್ಯರ್ಥಿಗೂ ದೇಣಿಗೆ ನೀಡುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ. ಇವರ ಪೋಸ್ಟ್ ಗೆ ಉಭಯ ಪಕ್ಷಗಳಾದ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫ್ಲೋರಿಡಾದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ 2 ದಿನಗಳ ಬಳಿಕ ಎಲಾನ್ ಮಸ್ಕ್ ಈ ರೀತಿ ಪೋಸ್ಟ್ ಮಾಡಿದ್ದಾರೆ. ಇನ್ನು ಎಲಾನ್ ಮಸ್ಕ್ ಅಷ್ಟೇ ಅಲ್ಲದೇ ಬಿಲಿಯನೇರ್ಗಳು, ಉದ್ಯಮಿಗಳು, ರಿಪಬ್ಲಿಕನ್ ಪಕ್ಷಕ್ಕೆ ದೇಣಿಗೆ ನೀಡುವ ಕೆಲ ಶ್ರೀಮಂತ ವ್ಯಕ್ತಿಗಳು ಭಾನುವಾರದಂದು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ನಂತರ ಎಲಾನ್ ಮಸ್ಕ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹೂಡಿಕೆ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ಹರಡಿತ್ತು.